ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ವಿಜಯಪುರ, ಮಾ ೧೫- ಗಂಡು ಹೊರ ಕೆಲಸಕ್ಕೆ ಹೆಣ್ಣು ಮನೆಯೊಳಗೆ ಇರಲು ಮಾತ್ರ ಸೀಮಿತಳು ಎಂಬ ಮನಸ್ಥಿತಿ ಇತ್ತು. ಈಗ ಅದು ಬದಲಾಗಿದ್ದು, ಮಹಿಳೆಯರಿಗೆ ಶೇ ೩೩ ರಷ್ಟು ಮೀಸಲಾತಿ ದೊರೆತಿದ್ದು, ಇದನ್ನು ಬಳಸಿಕೊಂಡು ಹೆಣ್ಣುಮಕ್ಕಳು ಸಾಧನೆ ಕಡೆಗೆ ಗಮನ ಹರಿಸಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ತಡೆ ಕಾಯಿದೆ ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯೆ ಎಸ್.ರವಿಕಲಾ ಹೇಳಿದರು.
ಹೋಬಳಿಯ ಕೋರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುವನಹಳ್ಳಿಯಲ್ಲಿ ಆಕ್ಸಿಲಿಯಂ ನವಜೀವನ ಸಂಸ್ಥೆ ಹಾಗೂ ಜೆಸಿಐ ದೇವನಹಳ್ಳಿ ಡೈಮಂಡ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಸಾಬೀತುಪಡಿಸುತ್ತಿದ್ದಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಪುರುಷನೊಂದಿಗೆ ಪೈಪೋಟಿ ನಡೆಸುತ್ತಿದ್ದಾಳೆ. ಇಡೀ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾಳೆ. ಮಹಿಳೆಯರು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಚಿಂತನೆಯೊಂದಿಗೆ ಪ್ರಯತ್ನ ಮಾಡಿದಾಗ ಉತ್ತಮ ಸಾಧನೆ ನಮ್ಮದಾಗುತ್ತದೆ. ಸ್ತ್ರೀಯರಿಂದ ಸಂಸ್ಕೃತಿಯ ರಕ್ಷಣೆ ಆಗುತ್ತಿದೆ. ಅವರಲ್ಲಿ ತಾಳ್ಮೆ, ಸಹನೆ, ಲಾಲನೆ ಪಾಲನೆಯಂತಹ ಗುಣಗಳಿವೆ. ಎಂದಉ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಎನ್.ತಿಲಕ್ ಕುಮಾರ್ ಮಾತನಾಡಿ, ಸಮಾಜದಲ್ಲಿ ದುಷ್ಟ ಶಕ್ತಿಗಳಿರುತ್ತವೆ. ಅವುಗಳನ್ನು ತಡೆಯಲು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಮುಂದಾಗಿ, ನಿಮಗೆ ಪ್ರತಿಭೆ ಇರುವ ಕ್ಷೇತ್ರದಲ್ಲಿ ಮುಂದುವರೆಯಿರಿ. ಈಗ ಕಾನೂನಿನಲ್ಲಿ ಸಾಕಷ್ಟು ರಕ್ಷಣೆಯಿದೆ. ಅದನ್ನು ಬಳಸಿಕೊಳ್ಳಲು ನಿಮಗೆ ಹಕ್ಕಿದೆ. ಆದರೆ, ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಿರಿ, ಬದಲಾದ ಪರಿಸರದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ನೀವು ನಿಮ್ಮದೆಯಾದ ಕೌಶಲದೊಂದಿಗೆ ಸ್ವಾವಲಂಬಿ ಜೀವನ ಸಾಗಿಸಬೇಕು. ಅಂದಾಗ ಮಾತ್ರ ನಿಮ್ಮ ಮಹತ್ವ ಹೆಚ್ಚಾಗುತ್ತದೆ. ಇದಕ್ಕೆ ಸತತ ಪ್ರಯತ್ನ ಮುಖ್ಯವಾಗಿದೆ ಎಂದು ಹೇಳಿದರು.
ಆಕ್ಸಿಲಿಯಂ ನವಜೀವನ ಸಂಸ್ಥೆಯ ಸೋದರಿ ಜಸ್ಸಿಂತಾ ಲೋಬೋ ಮಾತನಾಡಿ, ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಅಪಾರ. ಸ್ತ್ರೀಯರು ಪ್ರತಿಯೊಂದು ರಂಗದಲ್ಲೂ ಬೆಳವಣಿಗೆ ಹೊಂದಿ ಸಮಾಜದ ಕೈಗನ್ನಡಿಯಾಗಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಬಗೆಯ ಕ್ರೀಡೆಗಳನ್ನು ಆಯೋಜಸಲಾಗಿತ್ತು. ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಹೆಣ್ಣು ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದರು.
ಡೇರಿ ಅಧ್ಯಕ್ಷ ಪಿ.ಚನ್ನಕೃಷ್ಣಪ್ಪ ಮುಖಂಡರಾದ ಪಿ.ನಂಜಪ್ಪ, ಮುನಿಯಪ್ಪ, ಪಾಪಣ್ಣ, ಅಂಗನವಾಡಿ ಕಾರ್ಯಕರ್ತೆ ಮಮತಾ.ಎನ್, ದಾಸಪ್ಪ, ಎ.ನಾರಾಯಣಸ್ವಾಮಿ, ಬಿ.ನಾಗರಾಜಪ್ಪ, ಸಂಸ್ಥೆಯ ಸೋದರಿಯರಾದ ಬೆನ್ನಿ, ಲಿಜಿ, ಕಾರ್ಮೆಲ್ ಮೇರಿ, ಜಾಸ್ಮೀನ್, ಚಾಲಕ ಮುನಿಯಪ್ಪ, ಇದ್ದರು.