
ದೇವದುರ್ಗ,ಮಾ.೦೭- ಪ್ರತಿಮಹಿಳೆಯೂ ತನ್ನದೆಯಾದ ಸಾಮರ್ಥ್ಯ, ಶಕ್ತಿ ಹೊಂದಿದ್ದು, ಸಮಾಜ ಅವರಿಗೆ ಅನುಕಂಪ ತೋರಿಸುವ ಬದಲು ಅವಕಾಶ ನೀಡಬೇಕು. ಆಗ ಸಮಾನ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಪಾಲಕರು ಹೆಣ್ಣು ಗಂಡು ಎಂದು ಭೇದಭಾವ ಮಾಡದೆ ಇಬ್ಬರನ್ನೂ ಸಮಾನವಾಗಿ ಕಂಡು ಅಸಮಾನ ಅವಕಾಶ ಸೌಲಭ್ಯ ಒದಗಿಸಬೇಕು. ಅನೇಕ ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆದಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಕ್ರೀಡಾರಂಗ, ಸಿನಿಮಾ, ರಂಗಭೂಮಿಕಲೆ, ಕೃಷಿ ಸೇರಿ ಹಲವು ರಂಗದಲ್ಲಿ ತಮ್ಮದೆಯಾದ ಸಾಧನೆ ಮಾಡಿದ್ದಾರೆ ಎಂದರು.
ಮುಖ್ಯ ವೈದ್ಯಾಧಿಕಾರಿ ಶಿವಾನಂದ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಅಕ್ಷರಶಃ ನಿಜವಾಗಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಇದು ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಒದಗಿಬಂದಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಮಹಿಳೆಯರೂ ಬರಬೇಕು ಎಂದು ಹೇಳಿದರು.
ವೈದ್ಯರಾದ ನಾಗರಾಜ ಮಲ್ಕಾಪುರ, ಡಾ.ನಿರ್ಮಲಾ ದೇವಿ, ವಕೀಲೆ ಪ್ರತಿಮಾ ಚಿಂತಲಕುಂಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಚನ್ನಬಸಯ್ಯ ಹಿರೇಮಠ, ಅಂಜಮ್ಮ, ಜೀವನ್, ಶರಣಬಸವ ಕಾಳಾಪುರ, ಶರಣಬಸವ ಪೂಲಬಾವಿ, ಪ್ರಭು ಪೂಜಾರಿ, ಇಮಾಮ್‌ಅಲಿ ಇಟಗಿ, ಕವಿತಾ, ವನಿತಾ, ವೀರೇಶ, ಮಹಾಲಕ್ಷ್ಮಿ ಇತರರಿದ್ದರು.