ಅಂತಾರಾಷ್ಟ್ರೀಯ ಮಟ್ಟದಲ್ಲೂ ದಾವಣಗೆರೆಯ ಕೀರ್ತಿಪತಾಕೆ ಹಾರಿಸಲು ಕರೆ

ದಾವಣಗೆರೆ.ಜೂ.೧: ರಾಷ್ಟ್ರೀಯ ಮಟ್ಟದಲ್ಲಿ  ಸ್ಪರ್ಧಿಸಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿರುವ ದಾವಣಗೆರೆಯ ಸ್ಪರ್ಧಾಳುಗಳು ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಬೇಕಾಗಿದೆ ಮಾತ್ರವಲ್ಲದೆ ಅವರಿಗೆ ಮಾರ್ಗದರ್ಶನ ನೀಡುವ ಯೋಗ ತರಬೇತಿ ನೀಡುವ ಯೋಗ ಗುರುಗಳಾದ ಪರಶುರಾಮ್ ಅವರು ಸಹ  ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿಪತಾಕೆ ಹಾರಿಸಲಿ ಎಂದು ಶಬರಿಮಲೆ  ಅಯ್ಯಪ್ಪ ಸೇವಾ ಸಮಿತಿ ಯೋಗಾ ಫೆಡರೇಶನ್ ಅಧ್ಯಕ್ಷ ರುದ್ರಪ್ಪ ಆಶಿಸಿದರು.ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಶಬರಿಮಲೆ  ಅಯ್ಯಪ್ಪ ಸೇವಾ ಸಮಿತಿ ಯೋಗಾ ಫೆಡರೇಶನ್ ವತಿಯಿಂದ ಗುರುವಾರ ಮುಂಜಾನೆ ಆಯೋಜಿಸಲಾಗಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆದ  6ನೇ ರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಸಂಜನಾ ಹಾಗೂ ಲಾವಣ್ಯ ಅವರಿಗೆ ಹಾಗೂ ಇಂದು ಜನ್ಮ ದಿನ ಆಚರಿಸಿಕೊಂಡ ಯೋಗಗುರು ಡಾ.ಎನ್.ಪರಶುರಾಮಪ್ಪ ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯೋಗಾಭ್ಯಾಸ ಮಾಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಲು ನಿಯಮಿತ ಹಾಗೂ ನಿರಂತರ ಯೋಗಾಭ್ಯಾಸದಲ್ಲಿ ತೊಡಗಬೇಕು. ಆ ಮೂಲಕ ನಾವುಗಳು ಸದೃಢರಾಗುವ ಮೂಲಕ ಬಲಿಷ್ಠ ಸಮಾಜ ನಿರ್ಮಾಣ ಜತೆ ಬಲಿಷ್ಠ ದೇಶ ಕಟ್ಟಲು ಮುಂದಾಗಬೇಕೆಂದು ಕರೆ ನೀಡಿದರು.ಅಂತರರಾಷ್ಟ್ರೀಯ ಯೋಗಪಟು ಎನ್.ಪರಶುರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ರೋಗ ಮುಕ್ತ ಸಮಾಜಕ್ಕಾಗಿ ಯೋಗಾಭ್ಯಾಸ ಅಗತ್ಯ. ಯೋಗದಿಂದ ಧೀರ್ಘ ಕಾಲದ ಕಾಯಿಲಗಳನ್ನು ಸಹ ಗುಣಪಡಿಸಬಹುದು. ಕಾರಣ ಯಾವುದೇ ಹಿಂಜರಿಕೆ, ಕೀಳರಿಮೆ ಇಲ್ಲದೇ ಯೋಗಾಭ್ಯಾಸ ಮಾಡಿ ಉತ್ತಮ ಅರೋಗ್ಯ ಪಡೆಯಿರಿ ಎಂದ ಅವರು, ಸಂಸ್ಥೆ ಬೆಳೆದು ಬಂದ ಬಗ್ಗೆ  ಮಾಹಿತಿ ನೀಡಿ, ಚಾಂಪಿಯನ್ ಶಿಪ್ ನಲ್ಲಿ ಗೆದ್ದ ಸ್ಪರ್ಧಾರ್ಥಿಗಳಿಗೆ ಶುಭಾಶಯ ಕೋರಿದರು. ಈ ವೇಳೆ ಫೆಡರೇಷನ್ ಪದಾಧಿಕಾರಿಗಳಾದ ಗೋಪಾಲ್ ರಾವ್, ರಾಘವೇಂದ್ರ ಚವ್ಹಾಣ್, ಅಜಯ್, ಎಸ್.ರಾಜಶೇಖರ್, ಪತ್ರಕರ್ತರಾದ ಎಂ.ವೈ.ಸತೀಶ್, ವೀರೇಶ್, ಬಾತಿ ಶಂಕರ್, ನವೀನ್ ಸೇರಿದಂತೆ ಇತರರು ಇದ್ದರು.