ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ


ಪಣಜಿ,ನ.೨೦- ಪ್ರವಾಸಿಗರ ನೆಚ್ಚಿನ ತಾಣವೆಂದೇ ಬಿಂಬಿತವಾಗಿರುವ ಗೋವಾದಲ್ಲಿ ಇಂದಿನಿಂದ ನ.೨೮ ರ ತನಕ ಸಿನಿ ಹಬ್ಬ ನಡೆಯಲಿದ್ದು ದೇಶ ವಿದೇಶಗಳ ಅತ್ಯುತ್ತಮ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿನಿರಸಿಕರಿಗೆ ದೊರೆಯಲಿದೆ.
೯ ದಿನಗಳ ಕಾಲ ನಡೆಯಲಿರುವ ೫೨ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ಅತ್ಯುತ್ತಮ ಚಿತ್ರಗಳ ಪ್ರದರ್ಶನ ನಡೆಯಲಿದ್ದು ಇದಕ್ಕಾಗಿ ಕಡಲ ತೀರದ ನಗರಿ ಗೋವಾ ಸಜ್ಜುಗೊಂಡಿದೆ
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿಯ ಚಿತ್ರೋತ್ಸವವೂ ಭೌತಿಕವಾಗಿ ಮತ್ತು ವರ್ಚುವಲ್ ಮೂಲಕ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ೭೩ ದೇಶಗಳ ೧೪೮ ಚಿತ್ರಗಳು ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.ಮನೆಯಲ್ಲೇ ಕುಳಿತು ಈ ಬಾರಿ ವರ್ಚುವಲ್ ಮೂಲಕ ಅಂತಾರಾಷ್ಟ್ರೀಯ ಚಿತ್ರೋತ್ಸವ ವೀಕ್ಷಿಸುವ ಅವಕಾಶವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಲ್ಪಿಸಿದೆ.
ಅಂತರಾಷ್ಟ್ರೀಯ ಚಿತ್ರ ವಿಭಾಗದಲ್ಲಿ ೧೨ ಅತ್ಯುತ್ತಮ ಚಿತ್ರಗಳು ವರ್ಡ್ ಪ್ರೀಮಿಯರ್ ಕಾಣಲಿವೆ. ಇದರ ಜೊತೆಗೆ ಏಷ್ಯಾದ ವಿವಿಧ ದೇಶಗಳ ೨೬ ಚಿತ್ರಗಳು ಮತ್ತು ಭಾರತದ ವಿವಿಧ ಭಾಷೆಯ ೬೪ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.
ಈ ಬಾರಿಯ ಚಿತ್ರೋತ್ಸವಕ್ಕೆ ೬೨೪ ಚಿತ್ರಗಳು ೯೫ ದೇಶಗಳಿಂದ ಬಂದಿದ್ದವು. ಅವುಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್, ರಾಜ್ಯ ಸಚಿವ ಡಾ,ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಸೇರಿದಂತೆ ಗಣ್ಯಾತಿಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಗಳ ಸಿನಿ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಜಗತ್ತಿನ ವಿವಿಧ ಭಾಷೆಯ ಸಂಸ್ಕೃತಿ ಆಚಾರ-ವಿಚಾರ ಸಾಮಾಜಿಕ ವಿಷಯಗಳನ್ನು ಬಿಂಬಿಸುವ ಅತ್ಯುತ್ತಮ ಚಿತ್ರ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ.
ಬಾಲಿವುಡ್ ತಾರಾ ಮೆರುಗು
ಗೋವಾದ ಪಣಜಿಯ ಡಾ. ಶಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯ ಲಿರುವ ೫೨ನೇ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟರಾದ ಸಲ್ಮಾನ್ ಖಾನ್, ರಣವೀರ್ ಸಿಂಗ್, ರಿತೇಶ್ ದೇಶ್ ಮುಖ್, ಜೆನಿಲಿಯ ದೇಶ್ ಮುಖ್, ಶ್ರದ್ಧಾ ಕಪೂರ್, ನಿರ್ದೇಶಕ ಕರಣ್ ಜೋಹರ್ ಮನೀಶ್ಪಾಲ್ ಸೇರಿದಂತೆ ಬಾಲಿವುಡ್ ನಟ-ನಟಿಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ
ವರ್ಷದ ಪ್ರಶಸ್ತಿ
ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಹೇಮ ಮಾಲಿನಿ ಅವರಿಗೆ ವರ್ಷದ ವಾರ್ಷಿಕ ಪ್ರಶಸ್ತಿಯನ್ನು ಚಿತ್ರೋತ್ಸವದಲ್ಲಿ ಗೌರವಿಸಲು ನಿರ್ಧರಿಸಲಾಗಿದೆ.
ಇದರ ಜೊತೆಗೆ ನಟ ಪ್ರಸೂನ್ ಜೋಷಿ ಅವರಿಗೂ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಅಂತಾ ರಾಷ್ಟ್ರೀಯ ಚಿತ್ರೋತ್ಸವ ಸಂಘಟನಾ ಸಮಿತಿ ತಿಳಿಸಿದೆ. ಇದರ ಜೊತೆಗೆ ಅಮೆರಿಕ ಮತ್ತು ಹಂಗೇರಿಯಾದ ಚಿತ್ರ ನಿರ್ದೇಶಕರಿಗೆ ಶಾಮ್ ಬೆನಗಲ್ ಪ್ರಶಸ್ತಿ ನೀಡಿ ಗೌರವ ನೀಡಲಾಗುತ್ತದೆ.
ಪುನೀತ್, ಸಂಚಾರಿ ವಿಜಯ್‌ಗೆ ಶ್ರದ್ದಾಂಜಲಿ
ಕನ್ನಡದಲ್ಲಿ ಡೊಳ್ಳು, ಆಕ್ಟ್ ೧೯೭೮, ನೀಲಿಹಕ್ಕಿ, ತಲೆ ದಂಡ ಚಿತ್ರಗಳು ಪ್ರದರ್ಶನವಾಗುತ್ತಿದ್ದು ನಟ ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ಲ್ ವಿವಿಧ ಭಾಷೆಗಳ ಅಗಲಿದ ನಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಹಮ್ಮಿ ಕೊಳ್ಳಲಾಗಿದೆ.