ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನಾಚರಣೆ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.6: ಪ್ರತಿವರ್ಷ ಏಪ್ರಿಲ್ 5 ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನವನ್ನು ಆಚರಿಸಲಾಗುತ್ತದೆ. ‘ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯನ್ನು ಉತ್ತೇಜಿಸುವ’ ವಿಷಯದೊಂದಿಗೆ ಈ ಆತ್ಮಸಾಕ್ಷಿ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2019 ಜುಲೈ 25ರಂದು ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯ ಸಂಸ್ಕøತಿ ಉತ್ತೇಜಿಸುವ ನಿರ್ಣಯವನ್ನು ಅಂಗೀಕರಿಸುವುದರೊಂದಿಗೆ ಈ ದಿನವನ್ನು ಘೋಷಿಸಿತು.
ಸ್ಥಳೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮುದಾಯಗಳ ಪದ್ಧತಿಗಳಿಗೆ ಅನುಗುಣವಾಗಿ ಪ್ರೀತಿ ಮತ್ತು ಜಾಗೃತಿಯೊಂದಿಗೆ ಶಾಂತಿಯನ್ನು ನಿರ್ಮಿಸುವ ಮಹತ್ವದ ಬಗ್ಗೆ ಈ ದಿನವು ಜಾಗೃತಿ ಮೂಡಿಸುತ್ತದೆ. ಅಲ್ಲದೇ ಪ್ರೀತಿ ಮತ್ತು ಶಾಂತಿ, ಜಾಗೃತಿ ಮತ್ತು ಸುಸ್ಥಿರ ಅಭಿವೃದ್ಧಿ ನಡುವಿನ ಸಂಬಂಧವನ್ನೂ ಈ ದಿನ ಎತ್ತಿ ತೋರಿಸುತ್ತದೆ.
ಮಾನವರು ಪರಸ್ಪರ ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಮತ್ತು ಕ್ರೌರ್ಯ ತಡೆಯಲು ಸಹೋದರತ್ವ ಭಾವನೆ ಬೆಳೆಸಿಕೊಳ್ಳಬೇಕು. ಧರ್ಮ, ಭಾಷೆ, ಜನಾಂಗ ಅಥವಾ ಲಿಂಗವನ್ನು ಲೆಕ್ಕಿಸದೇ ಶಾಂತಿಯುತ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಮತ್ತು ಭವಿಷ್ಯವನ್ನು ಹಿಂಸಾಚಾರದಿಂದ ರಕ್ಷಿಸುವ ಅಗತ್ಯವನ್ನು ಇದು ತಿಳಿಸಿದೆ.
ಇದು ಮಾನವ ಹಕ್ಕುಗಳು ಮತ್ತು ಗೌರವವನ್ನು ಆಧರಿಸಿದ ಆತ್ಮಸಾಕ್ಷಿಯ ಬಗ್ಗೆ ಅರಿವು ಮೂಡಿಸುವ ಪ್ರಮುಖ ಹೆಜ್ಜೆಯಾಗಿದೆ. ದ್ವೇಷ, ಯುದ್ಧಗಳು ನಡೆಯುತ್ತಿರುವ ಈ ಯುಗದಲ್ಲಿ ಇದು ಅಗತ್ಯವಿದೆ.
ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ, ಶ್ರೀನಿಧಿ, ಸುಶಾಂತ್, ಶ್ರೇಯಾ ಬಂಡೆ ಅವರು ಅಂತಾರಾಷ್ಟ್ರೀಯ ಆತ್ಮ ಸಾಕ್ಷಿ ದಿನವನ್ನು ಆಚರಿಸಿದರು.