
ಬೆಂಗಳೂರು, ಫೆ.೨೭-ಶಾಲಾ-ಕಾಲೇಜುಗಳನ್ನು ಗುರಿಯಾಗಿಸಿಕೊಂಡು ರಾತ್ರಿವೇಳೆ ಕನ್ನಕಳವು ಮಾಡುತ್ತಿದ್ದ ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸಿರುವ ಜ್ಞಾನಭಾರತಿ ಪೊಲೀಸರು ನಗದು ಸೇರಿ ೫ ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ತಮಿಳುನಾಡಿನ ಸೇಲಂನ ಅಣ್ಣಾ ದೊರೈ(೪೨)ವೀರಮಲೈ ಅಲಿಯಾಸ್ ಕುಮಾರ್(೪೦) ಹಾಗೂ ಕೋಣಂ ಪೇಟೆಯ ಬಾಬು(೩೪) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಆರೋಪಿಗಳು ೨೦೦೧ ರಿಂದ ಶಾಲಾ-ಕಾಲೇಜುಗಳಲ್ಲಿ ಬೀಗ ಮುರಿದು ಕಳವು ಮಾಡುತ್ತಿದ್ದು ಇಲ್ಲಿಯವರೆಗೆ ೨೨ ವರ್ಷಗಳಿಂದ ಪೊಲೀಸರಿಗೆ ಸಿಗದೇ ಪರಾರಿಯಾಗುತ್ತಿದ್ದರು.
ಆರೋಪಿಗಳ ವಿಚಾರಣೆ ಸಮಯದಲ್ಲಿ ಹಾಗೂ ವೈಜ್ಞಾನಿಕ ತಂತ್ರಜ್ಞಾನದ ವಿಧಾನಗಳಿಂದ ದೊರೆತ ಮಾಹಿತಿಗಳಿಂದ ಆರೋಪಿಗಳು ೨೦೦೧ ರಿಂದ ಪತ್ತೆಯಾಗದೇ ಉಳಿದಿದ್ದ ಬೆಂಗಳೂರು, ಕೋಲಾರ ಹಾಗೂ ದಾವಣಗೆರೆ ಜಿಲ್ಲೆಯ ೧೨ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಜ್ಞಾನಭಾರತಿಯ ಶಾಲೆ, ಕಾಲೇಜುಗಳಲ್ಲಿ ರಾತ್ರಿ ವೇಳೆ ಕನ್ನಕಳವು ಮಾಡಿದ್ದ ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಅಧುನಿಕ ತಂತ್ರಜ್ಞಾನ ಬಳಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದರು.