ಅಂತಶಕ್ತಿಯ ಕೊರತೆ ಆತ್ಮಹತ್ಯೆಗೆ ಕಾರಣವಾಗುತ್ತಿದೆ: ಬಿ.ಕೆ ಸುಮನ ಬಹೆನ್

ಬೀದರ್: ಸೆ.3:ಆಂತರಿಕ ಶಕ್ತಿ ಕೊರತೆಯಿಂದ ಇಂದು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಬ್ರಹ್ಮಾಕುಮಾರಿ ಪ್ರಧಾನ ಕೇಂದ್ರದ ಶೈಕ್ಷಣಿಕ ವಿಭಾಗದ ಸಂಚಾಲಕಿ ಬಿ.ಕೆ ಸುಮನ ಬಹೆನ್ ತಿಳಿಸಿದರು.

ಶನಿವಾರ ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದಲ್ಲಿ ‘ಅಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವರ್ಣಿಮ ಭಾರತದ ಉದಯ’ ಶೀರ್ಷಿಕೆಯಡಿ ಜರುಗಿದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದರು.

ಸಾಮಾಜಿಕ ಜಾಲತಾಣದ ಪ್ರಮುಖ ಸಾಧನವಾದ ಮೊಬೈಲ್‍ಗೆ ವಿದ್ಯಾರ್ಥಿಗಳು ಆಕರ್ಷಣೆಯಾಗಿ ಕ್ರೂರಿಗಳಾಗಿ ಹೊರಹೊಮ್ಮಿ ತಮ್ಮ ಪಾಲಕರನ್ನು ಸಾಯಿಸಲು ಸಹ ಹಿಂದೇಟು ಹಾಕುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು.

ಇಂದು ವಿದ್ಯಾರ್ಥಿಗಳಲ್ಲಿ ಮಾನವಿಯ ಮೌಲ್ಯಗಳು ಹಾಗೂ ಸಂಬಂಧಗಳು ಮಾಯವಾಗಿ ಸ್ವಾರ್ಥದ ಗೊಂಬೆಗಳಾಗಿ ಮಾರ್ಪಡುತ್ತಿರುವರು. ಮನೆಯಲ್ಲಿ ಪಾಲಕರ ಹಾಗೂ ಸಮಾಜದಲ್ಲಿ ಬೇರೆಯವರ ಮಾತನ್ನು ಕೇಳಲು ಸಿದ್ದರಿಲ್ಲ. ಸದಾ ಒತ್ತಡದ ಜೀವನ, ಖಿನ್ನತೆಯ ಕಾರಣದಿಂದ ಅವರಲ್ಲಿನ ಆತ್ಮಬಲ ಸಂಪೂರ್ಣ ನಿಶಕ್ತಗೊಳ್ಳುತ್ತಿದ್ದು, ಅದನ್ನು ಬಲಪಡಿಸಲು ನಮ್ಮ ಸಹೋದರಿಯರು ಶಾಲಾ, ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅಧ್ಯಾತ್ಮ, ಯೋಗ ಹಾಗೂ ರಾಜಯೋಗದ ಶಿಕ್ಷಣ ನೀಡಬೇಕಾಗಿದೆ ಎಂದರು.

ರಾಜಸ್ಥಾನ ಜೈಪುರ ಬ್ರಹ್ಮಾಕುಮಾರಿ ಕೇಂದ್ರದ ಸಂಚಾಲಕಿ ಬಿ.ಕೆ ಚಿತ್ರಾ ಬಹೆನ್ ಮಾತನಾಡಿ, ದೇಶದ ಎಲ್ಲ ಶಾಲಾ, ಕಾಲೇಜುಗಳಲ್ಲಿ ರಾಜಯೋಗ ಥಾಟ್ ಲ್ಯಾಬ್ ಸ್ಥಾಪಿಸುವ ಅವಶ್ಯಕತೆ ಇದೆ. ಒಂದು ಶಾಲೆ ಅಥವಾ ಕಾಲೇಜಿನಲ್ಲಿ ರಸಾಯನಶಾಸ್ತ್ರ ಹಾಗೂ ಇತರೆ ಲ್ಯಾಬರೊಟರಿ ಸ್ಥಾಪಿಸಿದಂತೆ ಒಂದು ಕೋಣೆ ಸ್ಥಾಪಿಸಿ, ಅಲ್ಲಿ ಮೆಡಿಟೆಶನ್‍ಗಾಗಿ ವ್ಯವಸ್ಥೆ ಮಾಡಬೇಕು. ಇಂದು ಶಾಲೆ, ಕಾಲೇಜುಗಳಿಗೆ ಕ್ರೀಡಾಂಗಣ ಸ್ಥಾಪಿಸಿದಂತೆ ರಾಜಯೋಗ ಥಾಟ್ ಲ್ಯಾಬ್ ಸ್ಥಾಪಿಸುವ ಮೂಲಕ ಅಲ್ಲಿಯ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಅಧ್ಯಾತ್ಮದ ವಾತಾವರಣ ನಿರ್ಮಾಣ ಮಾಡಿ ಮಕ್ಕಳ ಮನೋಬಲ ಹಾಗೂ ಆತ್ಮಬಲ ಹೆಚ್ಚಿಸಲು ಶಿಕ್ಷಕರು ಮುಂದೆ ಬರಬಬೇಕೆಂದು ಕರೆ ನೀಡಿದ ಅವರು, ಜೈಪುರದ ವಿಶ್ವವಿದ್ಯಾಲಯ ಹಾಗೂ ದೇಶದ ಅನೇಕ ಕಡೆಗಳಲ್ಲಿ ಈಗಾಗಲೇ ರಾಜಯೋಗ ಥಾಟ್ ಲ್ಯಾಬ್ ಆರಂಭಿಸಿದ್ದು, ಈ ಅಭಿಯಾನ ರಾಷ್ಟ್ರೀಕೃತವಾಗಬೇಕಿದೆ ಎಂದರು.

ಗುರುನಾನಕದೇವ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ.ದೇವೇಂದ್ರ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅಧ್ಯಾತ್ಮದ ಅವಶ್ಯಕತೆ ಅನಿವಾರ್ಯವಾಗಿದೆ. ಅದರಲ್ಲೂ ನಮ್ಮಂತಹ ತಾಂತ್ರಿಕ ಕಾಲೇಜುಗಳಲ್ಲಿ ಇದರ ಅವಶ್ಯತೆ ಬಹಳಷ್ಟಿದ್ದು, ಡ್ರಗ್‍ಗೆ ಆಕರ್ಷಣೆಯಾಗುತ್ತಿರುವ ತಾಂತ್ರಿಕ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಈ ಲ್ಯಾಬ್‍ನ ಅನಿವಾರ್ಯ ಇದ್ದು, ಬೀದರ್ ಜಿಲ್ಲೆಯಲ್ಲಿ ನಮ್ಮ ಕಾಲೇಜಿನಲ್ಲಿಯೇ ಮೊಟ್ಟ ಮೊದಲ ರಾಜಯೋಗ ಥಾಟ್ ಲ್ಯಾಬ್ ಪ್ರಾರಂಭಕ್ಕೆ ಅವಕಾಶ ನೀಡಲಾಗುವುದೆಂದು ಭರವಸೆ ನೀಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ವಿದ್ಯಾ ಪಾಟೀಲ ಮಾತನಾಡಿ, ಮೊದಲು ಶಾಲೆ, ಕಾಲೇಜುಗಳಲ್ಲಿ ಮೌಲ್ಯ ಶಿಕ್ಷಣ ವ್ಯವಸ್ಥೆ ಇತ್ತು. ಇತ್ತಿಚೀಗಂತೂ ಹಣ ಗಳಿಕೆಯ, ಅಂಕ ಗಳಿಕೆಯ ಶಿಕ್ಷಣ ನೀಡುವ ಪದ್ದತಿ ಬಂದಿದ್ದು, ಇದು ವಿದ್ಯಾರ್ಥಿಗಳಲ್ಲಿ ಸ್ವಾರ್ಥದ ವಾತಾವರಣ ನಿರ್ಮಾಣ ಮಾಡುತ್ತಿದೆ. ಐಕ್ಯು ಹಾಗೂ ಎಸ್.ಕ್ಯು ಆಧಾರಿತ ಧರ್ಮ ರಹಿತದ ಅಧ್ಯಾತ್ಮಿಕ ಶಿಕ್ಷಣ ನೀಡಿದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸುವ ವಿಶಾಲ ಮನೋಬಲ ಮಕ್ಕಳಲ್ಲಿ ಕಾಣಬಹುದಾಗಿದೆ ಎಂದರು.

ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಮಾತನಾಡಿ, ಭಾರತವು ಯುವಜನರ ದೇಶವಾಗಿದೆ. ಯುವಶಕ್ತಿ ಸಶಕ್ತವಾಗಿದ್ದರೆ ದೇಶ ಬಲಿಷ್ಟವಾಗಿರುತ್ತದೆ. ಈ ನಿಟ್ಟಿನಲ್ಲಿ ಅವರಲ್ಲಿನ ನಕಾರಾತ್ಮಕ ಬೆಳವಣಿಗೆಗೆ ಕಡಿವಾನ ಹಾಕಲು ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದ್ದು, ಬ್ರಹ್ಮಾಕುಮಾರಿ ಕೇಂದ್ರ ತನ್ನ ಶೈಕ್ಷಣಿಕ ವಿಭಾಗದಿಂದ ಈ ವರ್ಷ ಯುವಜನರಿಗೆ ಮೌಲ್ಯಯುತ ಶಿಕ್ಷಣ ನೀಡಲು ಈ ರೈಜ್ ಅಭಿಯಾನ ಆಗಸ್ಟ್ 25ರಿಂದಲೇ ಪ್ರಾರಂಭಿಸಿದ್ದು, ಬೀದರ್ ಜಿಲ್ಲೆಯಲ್ಲಿ ಇಂದಿನಿಂದ ಎಲ್ಲ ಶಾಲೆ, ಕಾಲೇಜುಗಳಲ್ಲಿ ರಾಜಯೋಗ ಅಭ್ಯಾಸ ಮಾಡಿಸಲಿದ್ದೇವೆ ಎಂದರು.

ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಎಲ್ಲ ಶಾಖೆಗಳ ಮುಖ್ಯಸ್ಥರು, ಬಿ.ಕೆ ಸಹೋದರ, ಸಹೋದರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿ.ಕೆ ಜ್ಯೋತಿ ಬಹೆನ್ ಕಾರ್ಯಕ್ರಮ ನಿರೂಪಿಸಿದರು.