
ರಾಯಚೂರು,ಮಾ.೧೮- ನಾವು ಹೆಣ್ಣಾಗಿ ಹುಟ್ಟಿದಕ್ಕೆ ಹೆಮ್ಮೆ ಪಡಬೇಕು. ಹೆಣ್ತನಕ್ಕೆ ಅದರದ್ದೇ ಆದ ವಿಶೇಷ ಶಕ್ತಿ ಮತ್ತು ಮಹತ್ವವಿದೆ.
ಪರಕೀಯರ ನಿರಂತರ ದಾಳಿಯಿಂದ ದೇಶ ತತ್ತರಿಸಿದ್ದರೂ ಇಂದಿಗೂ ಭಾರತೀಯ ಸಂಸ್ಕೃತಿ ಜೀವಂತವಾಗಿರುವುದು ಮಹಿಳೆಯರಿಂದ ಎಂದು ಜಾನಕಿ ಪುರೋಹಿತ್ ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಸೋಮ ಸುಭದ್ರಮ್ಮ ರಾಮನಗೌಡ ಮಹಿಳಾ ಮಹಾವಿದ್ಯಾಲಯದಲ್ಲಿ ದಿನಾಂಕ ೧೭-೦೩-೨೦೨೩ ರಂದು ಹಮ್ಮಿಕೊಂಡಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸುದೀರ್ಘ ಇತಿಹಾಸವಿದೆ. ವಿಶ್ವಸಂಸ್ಥೆ ೧೯೭೫ರಲ್ಲಿ ಮಾ. ೦೮ನ್ನು ಅಂತರ ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲು ಅಧಿಕೃತವಾಗಿ ಘೋಷಿಸಿತು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡುತ್ತಿದ್ದಾರೆ. ಈ ದಿನಾಚರಣೆಯು ಮಹಿಳೆಯರ ಅಭಿವೃದ್ಧಿ ಮತ್ತು ಸಾಧನೆಗಳನ್ನು ಸ್ಮರಿಸುತ್ತಲೇ ಜಗತ್ತಿನಾದ್ಯಂತ ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಭಾರತೀಯ ಸಮಾಜದ ಮಹಿಳೆಯರ ಸ್ಥಾನ ಮಾನಗಳನ್ನು ಕುರಿತು ತಿಳಿಸಿದ ಅವರು ವೇದ ಕಾಲದ ಬ್ರಹ್ಮವಾದಿನಿಯಾದ ಮದಾಲಸ, ರಾಣಿ ಚನ್ನಬೈರವ ದೇವಿ ಮತ್ತು ಅಗ್ನಿಪುತ್ರಿ ಎನಿಸಿದ ಟೆಸ್ಸಿ ಥಾಮಸ್ ಮೊದಲಾದವರ ಜೀವನ ಸಾಧನೆಗಳನ್ನು ಕುರಿತು ಮಾತನಾಡಿ ಅವರ ಸಾಧನೆಗಳು ನಮ್ಮ ಬದುಕಿಗೆ ಪ್ರೇರಣೆಗಳಾಗಿವೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಸತ್ಯನಾರಾಯಣ ಮಹಿಳೆಯರ ಕುರಿತು ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಮುಖ್ಯವಾಗಿರುತ್ತದೆ. ಮಹಿಳೆ ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸಹೋದರಿಯಾಗಿ, ಸಮಾಜದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ, ನೀವೆಲ್ಲಾ ಯಶಸ್ವಿಯಾಗಿ ಮಹಿಳೆಯರಾಗಿ ಹೊರಹೊಮ್ಮಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ವೇದಿಕೆಯ ಮೇಲೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತರಾದ ಈರಮ್ಮ ಶರಣೇಗೌಡ, ಐ.ಕ್ಯೂ.ಎ.ಸಿ ಸಂಯೋಜಕರಾದ ಸಂಜಯ ಪವಾರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಮಹ್ಮದ್ ಇಲಿಯಾಸ್ ಉಪಸ್ಥಿತರಿದ್ದರು.
ಸಹನಾ ವೆನ್ನೆಲ್ಲಾ ಪ್ರಾರ್ಥಿಸಿದರು, ಗೌರಿ ಪಲ್ಲಕ್ಕಿಯವರು ಸ್ವಾಗತಿಸಿದರು, ಡಾ. ಮಹ್ಮದ್ ಇಲಿಯಾಸ್ ಪ್ರಾಸ್ತಾವಿಕ ನುಡಿದರು, ಡಾ.ರಾಜೇಶ್ವರಿ ಅತಿಥಿಗಳನ್ನು ಪರಿಚಯಿಸಿದರು. ಗಿರಿಯಪ್ಪ ನಾಯಕ ವಂದಿಸಿದರೆ, ನಾಜೀಯಾ ಸುಲ್ತಾನ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.