ಅಂತರ್‌ಜಿಲ್ಲಾ ಸರ ಸುಳಿಗೆ ಆರೋಪಿ ಸೆರೆ: ಭಾರೀ ಮೌಲ್ಯದ ಸೊತ್ತು ವಶ


ಉಡುಪಿ, ಜ.೬- ಕಳವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ಒಂಟಿ ಮಹಿಳೆ ಯರನ್ನು ಗುರಿಯಾಗಿರಿಸಿಕೊಂಡು ಸರ ಸುಲಿಗೆ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳವು ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಈತ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು ಒಂಭತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ನಿನ್ನೆ ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಈ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ಹೊಯಿಗೆ ಬಜಾರ್ ಮೂಲದ ಪ್ರಸ್ತುತ ಮಂಗಳಾದೇವಿ ಮುಳಿಹಿತ್ಲು ನಿವಾಸಿ ಚಂದ್ರಶೇಖರ (೨೫) ಬಂಧಿತ ಆರೋಪಿ. ಈತನಿಂದ ಒಟ್ಟು ೯,೩೮,೨೦೦ ರೂ. ಮೌಲ್ಯದ ೧೭೨.೦೨ ಗ್ರಾಂ ಚಿನ್ನ ಹಾಗೂ ಟಿವಿಎಸ್ ಸ್ಟಾರ್ ಸಿಟಿ ಬೈಕ್, ಟಿವಿಎಸ್ ವಿಕ್ಟರ್, ಜುಪಿಟರ್ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಕೆಲವು ಸಮಯಗಳಿಂದ ಉಡುಪಿ ಜಿಲ್ಲೆ ಯಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ಎಸ್ಪಿ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಹಾಗೂ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಯಿತು. ಮೊದಲ ತಂಡದಲ್ಲಿ ಉಡುಪಿ ನಗರ ವೃತ್ತ ನಿರೀಕ್ಷಕ ಮಂಜುನಾಥ ಹಾಗೂ ಸಿಬ್ಬಂದಿ, ಎರಡನೆ ತಂಡದಲ್ಲಿ ಡಿಸಿಐಬಿ ನಿರೀಕ್ಷಕ ಮಂಜಪ್ಪಡಿ.ಆರ್. ಹಾಗೂ ಸಿಬ್ಬಂದಿ, ಮೂರನೆ ತಂಡದಲ್ಲಿ ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ ಹಾಗೂ ಸಿಬ್ಬಂದಿಯನ್ನು ನೇಮಿಸಲಾಯಿತು. ಜ.೩ರಂದು ಡಿಸಿಐಬಿ ನಿರೀಕ್ಷಕರ ಮಂಜಪ್ಪತಂಡ ಜುಪಿಟರ್ ಸ್ಕೂಟರ್‌ನಲ್ಲಿ ಅಲೆವೂರು ಕಡೆಯಿಂದ ಡಯಾನ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಆರೋಪಿಯನ್ನು ಕುಕ್ಕಿಕಟ್ಟೆ ಜಂಕ್ಷನ್ ಬಳಿ ವಶಕ್ಕೆ ಪಡೆದುಕೊಂಡಿತು. ಆರೋಪಿಯನ್ನು ಕೂಲಂಕಷವಾಗಿ ವಿಚಾರಣೆ ಗೊಳಪಡಿಸಿ, ಸ್ಕೂಟರ್ ದಾಖಲಾತಿಯನ್ನು ಕೇಳಿದಾಗ, ತಾನು ಸರಗಳ್ಳತನ ಮಾಡಲು ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆ ಎಂಬಲ್ಲಿ ಸೆಕೆಂಡ್ ಹ್ಯಾಂಡ್ ಬಜಾರ್‌ನಿಂದ ಖರೀದಿಸಲು ಟೆಸ್ಟ್ ರೈಡ್ ಮಾಡಿ ನೋಡುವುದಾಗಿ ಸುಳ್ಳು ಹೇಳಿ ಮೋಸ ಮಾಡಿ ತೆಗೆದುಕೊಂಡು ಬಂದಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಎಸ್ಪಿ ತಿಳಿಸಿದರು. ಮಂಗಳೂರು ನಗರದ ಬರ್ಕೆ, ಮಣಿಪಾಲ ಠಾಣೆ ಹಾಗೂ ಕಂಕನಾಡಿ ಠಾಣಾ ವ್ಯಾಪ್ತಿಯಿಂದ ತಲಾ ಒಂದೊಂದು ಬೈಕ್‌ನ್ನು ಇದೇ ರೀತಿ ಮೋಸದಿಂದ ಪಡೆದು, ಅದೇ ಬೈಕ್‌ಗಳನ್ನು ಸರಗಳ್ಳತನ ಮಾಡಲು ಉಪಯೋಗಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು. ಈತ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಎರಡು, ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು ಮಂಗಳೂರು ನಗರದ ಕದ್ರಿ, ಮುಲ್ಕಿಯಲ್ಲಿ ತಲಾ ಒಂದು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಅಕ್ಟೋಬರ್ ತಿಂಗಳಲ್ಲಿ ೩, ನವೆಂಬರ್ ತಿಂಗಳಲ್ಲಿ ಮೂರು, ಡಿಸೆಂಬರ್ ತಿಂಗಳಲ್ಲಿ ಒಂದೇ ದಿನ ನಾಲ್ಕು ಸರಕಳವು ಕೃತ್ಯ ಎಸಗಿದ್ದನು. ಆರೋಪಿ ಇನ್ನು ಹೆಚ್ಚಿನ ಕಡೆಗಳಲ್ಲಿ ಅಪರಾಧ ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದ್ದು, ಈ ಬಗ್ಗೆ ಉಡುಪಿ ನಗರ ವೃತ್ತ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಬಂಧಿತ ಈ ಹಿಂದೆ ದ.ಕ. ಜಿಲ್ಲೆಯ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ಆರೋಪಿ ಯಾಗಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಉಡುಪಿ ನಗರ ಎಸ್ಸೈ ಸಕ್ತಿವೇಲು, ಅಪರಾಧ ವಿಭಾಗದ ಎಸ್ಸೈ ವಾಸಪ್ಪ ನಾಯ್ಕ, ಮಣಿಪಾಲ ಎಸ್ಸೈ ರಾಜ್‌ಶೇಖರ್, ಮಲ್ಪೆಎಸ್ಸೈ ತಿಮ್ಮೇಶ್, ಕಾಪು ಎಸ್ಸೈ ರಾಘವೇಂದ್ರ, ಉಡುಪಿ ಸಂಚಾರ ಠಾಣಾ ಎಸ್ಸೈಗಳಾದ ಅಬ್ದುಲ್ ಖಾದರ್ ಮತ್ತು ಶೇಖರ್ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿ ಪಾಲ್ಗೊಂಡಿದ್ದಾರೆ.