ವಿಜಯಪುರ: ಜೂ.27:ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಲೋಯೋಲಾ ಅಂತರರಾಷ್ಟ್ರೀಯ ಕಾಲೇಜ್‍ನಲ್ಲಿ ಜೂ.26ರಂದು ಹಮ್ಮಿಕೊಂಡ ಜಾಥಾ ಕಾರ್ಯಕ್ರಮಕ್ಕೆ ಲೋಯೋಲಾ ಸಂಸ್ಥೆಯ ಫಾದರ್ ಟೇಲರ್ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ|| ಎಸ್.ಎಮ್.ಗುಣಾರಿ ಜಂಟಿಯಾಗಿ ಚಾಲನೆ ನೀಡಿದರು.
ನಂತರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ|| ಎಸ್.ಎಮ್.ಗುಣಾರಿ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವಂತೆ ಕರೆ ನೀಡಿದ ಅವರು, ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಮಾದಕವಸ್ತು ಸೇವನೆ ಹೇಗೆ ತಡೆಗಟ್ಟುವುದು ಮತ್ತು ಇದರ ದುಷ್ಪರಿಣಾಮಗಳ ಬಗ್ಗೆ ಮನೋರೋಗ ತಜ್ಞರಾದ ಡಾ|| ಮಂಜುನಾಥ ಮಸಳಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಎಮ್.ಎಸ್ ಬಿರಾದಾರ ಸೇರಿದಂತೆ ಶಿಕ್ಷಕರು ಮತ್ತು ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.