ಅಂತರ್‌ರಾಜ್ಯ ಬೈಕ್ ಕಳ್ಳರ ಸೆರೆ 30 ಲಕ್ಷ ಮೌಲ್ಯದ ವಾಹನಗಳ ವಶ

ಬೆಂಗಳೂರು,ಸೆ.೧೭- ಅಂತರ್‌ರಾಜ್ಯ ದ್ವಿಚಕ್ರ ವಾಹನಗಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಕೋರಮಂಗಲ ಪೊಲೀಸರು ೧೫ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ನಾಲ್ವರು ಅಂತರ್‌ರಾಜ್ಯ ಕಳ್ಳರಿಂದ ೯ ಡಿಯೋ ಸ್ಕೂಟರ್, ೪ ಪಲ್ಸರ್ ಬೈಕ್ ಸೇರಿ ೨೯ ದ್ವಿಚಕ್ರ ವಾಹನಗಳು, ಆಟೋವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ. ಆರೋಪಿಗಳಲ್ಲಿ ನಗರದ ಓರ್ವ ಸೇರಿದ್ದು, ಆತನೊಂದಿಗೆ ಸೇರಿದ ತಮಿಳುನಾಡಿನ ಮೂವರು ಬಂಧಿತರು ಗ್ಯಾಂಗ್ ಕಟ್ಟಿಕೊಂಡು ಕೋರಮಂಗಲ, ಮಡಿವಾಳ, ಹುಳಿಮಾವು, ಬೊಮ್ಮನಹಳ್ಳಿ, ಆನೇಕಲ್ ಸೇರಿದಂತೆ ರಾಜ್ಯದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು. ಕಳವು ಮಾಡಿದ ವಾಹನಗಳನ್ನು ತಮಿಳುನಾಡಿನ ತುರುವಣ್ಣಾಮಲೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದರು ಎಂದು ತಿಳಿಸಿದರು.
ಆರೋಪಿಗಳು ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುವುದನ್ನು ಕರಗತ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೋರಮಂಗಲದಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣವನ್ನು ಬೆನ್ನತ್ತಿದ್ದ ಇನ್ಸ್‌ಪೆಕ್ಟರ್ ನಟರಾಜ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
೯ ದ್ವಿಚಕ್ರ ವಾಹನಗಳ ವಶ
ಬಂಡೆಪಾಳ್ಯ ಪೊಲೀಸ್ ಠಾಣೆಯ ಗಸ್ತು ಸಿಬ್ಬಂದಿಯ ಚಾಣಕ್ಷತೆಯಿಂದ ಇಬ್ಬರು ಅಂತರರಾಜ್ಯ ಬೈಕ್‌ಗಳ್ಳರು ಸಿಕ್ಕಿಬಿದ್ದಿದ್ದು, ೧೫ ಲಕ್ಷ ಮೌಲ್ಯದ ೯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಬಾಬಾ ತಿಳಿಸಿದರು.
ಕಳೆದ ಸೆ. ೭ ರಂದು ಮಂಗಮ್ಮನಪಾಳ್ಯದ ಮುಖ್ಯರಸ್ತೆಂiiಲ್ಲಿ ಗಸ್ತು ತಿರುಗುತ್ತಿದ್ದ ಬಂಡೆಪಾಳ್ಯ ಠಾಣಾ ಸಿಬ್ಬಂದಿ ಫಿರೋಜ್ ಹಾಗೂ ಸಂದೀಪ್ ಅನುಮಾನಾಸ್ಪದವಾಗಿ ಬಂದ ಹೊಸೂರು ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರನ್ನು ಠಾನೆಗೆ ಕರೆತಂದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡುವುದು ಪತ್ತೆಯಾಗಿದ್ದು, ವಿಚಾರಣೆ ವೇಳೆ ಸೂರ್ಯನಗರ, ಹೆಬ್ಬಗೋಡಿ, ಪರಪ್ಪನ ಅಗ್ರಹಾರ, ಸಂಪಂಗಿ ರಾಮನಗರ, ಬಂಡೇಪಾಳ್ಯಗಳಲ್ಲಿ ೯ ಬೈಕ್ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಕಳವು ಮಾಡಿದ್ದ ಬೈಕ್‌ಗಳನ್ನು ಹೊಸೂರಿನಲ್ಲಿ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಬಾಬಾ ತಿಳಿಸಿದರು.