ಅಂತರ್ಜಾಲ ನಾಟಕೋತ್ಸವಕ್ಕೆ ಚಾಲನೆ


ಸಾಣೇಹಳ್ಳಿ.ನ.೨; ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ನಿಮಿತ್ತ ಮುಂಜಾನೆ ಶ್ರೀಮಠದ ಅಂಗಳದಲ್ಲಿ ಆಯೋಜನೆಗೊಂಡಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯವಹಿಸಿ, ಶಿವ ಧ್ವಜಾರೋಹಣ ನೆರವೇರಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಭಾರತೀಯ ಪರಂಪರೆಯಲ್ಲಿ ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮವನ್ನು ಗಣಪತಿ ಪೂಜೆಯೊಂದಿಗೆ ಆರಂಭ ಮಾಡುವರು. ಆದರೆ ಶರಣ ಪರಂಪರೆಯನ್ನು ತಮ್ಮ ನಡೆ-ನುಡಿಗಳಲ್ಲಿ ಆಳವಡಿಸಿಕೊಂಡಿದ್ದ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶಿವ ಧ್ವಜಾರೋಹಣದ ಮೂಲಕ ಕಾರ್ಯಚಟುವಟಿಕೆಗಳನ್ನು ಆರಂಭಿಸುವ ಪದ್ಧತಿಯನ್ನು ಜಾರಿಗೆ ತಂದರು.

ಅದೇ ಪರಂಪರೆಯನ್ನು ನಾವೂ ಮುಂದುವರಿಸಿಕೊಂಡು ಬಂದಿದ್ದೇವೆ. ಪ್ರಾರ್ಥನೆ ಬದುಕಿಗೆ ಶಕ್ತಿಯನ್ನು ತಂದುಕೊಡುತ್ತದೆ. ಮನಸ್ಸಿನ ಕಲುಷಿತ ಭವನೆಗಳನ್ನು ಕಳೆದು ಮನೋವೈಶಾಲ್ಯತೆಯನ್ನು ಬೆಳೆಸುತ್ತದೆ. ವಿಕಾರಗೊಂಡ ಮನಸ್ಸು ವಿಕಾಸ ಹೊಂದುತ್ತದೆ. ಪ್ರಾರ್ಥನೆಯ ಮೂಲಕ ತನ್ನ ಬುದ್ಧಿಗೆ ಬೆಳಕನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ಬಸವಣ್ಣನವರು ಹೇಳುವಂತೆ ಶಿವಚಿಂತೆ, ಶಿವಜ್ಞಾನ ಇಲ್ಲದ ಮನುಷ್ಯ ಬೇಗ ಹುಟ್ಟಿ ಬೇಗ ಸಾಯುವ ಸಗಣ ಯ ಹುಳದಂತೆ. ಮನುಷ್ಯ ಹೀಗೆ ನಿರರ್ಥಕವಾಗಿ ಸಾಯದೆ ಸಾಧನೆಗೈಯಬೇಕು. ಕಾಡಮೃಗಗಳೇ ಒಂದಾಗಿ ಬದುಕುತ್ತಿರುವಾಗ ನಾಡಿನ ಮೃಗಗಳಾದ ನಾವು ಒಂದಾಗಿ ಬಾಳಬೇಕು. ಮನುಷ್ಯನಲ್ಲಿರುವ ಅಹಂಕಾರ, ದ್ವೇಷ, ಮತ್ಸರವನ್ನು ಕಳೆದುಕೊಳ್ಳುವುದೇ ಪ್ರಾರ್ಥನೆಯ ಉದ್ದೇಶ. ಪ್ರಾರ್ಥನೆ ಏಕಾಗ್ರತೆಯನ್ನು ಬೆಳೆಸುತ್ತದೆ. ಕ್ಷುಲ್ಲಕ ಗುಣಗಳನ್ನು ಕಳೆದು ವಿಶ್ವಪ್ರೇಮವನ್ನು ಕರುಣ ಸುತ್ತದೆ. ಇದೊಂದು ಯಾಂತ್ರಿಕ ಕ್ರಿಯೆಯಾಗಬಾರದು ಎಂದರು. ಆರಂಭದಲ್ಲಿ ಶಿವಸಂಚಾರದ ನಾಗರಾಜ್ ಸಾಣೇಹಳ್ಳಿ, ವಿದ್ಯಾರ್ಥಿಗಳಾದ ಸುಪ್ರಭೆ ಮತ್ತು ಮುಕ್ತಾ ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಿವಮಂತ್ರ ಲೇಖನ ಬರೆಯಲಾಯಿತು. ಅಧ್ಯಾಪಕ ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು. ದೈಹಿಕ ಅಂತರದೊಂದಿಗೆ ಆಸಕ್ತರು ಮಾತ್ರ ಭಾಗವಹಿಸಿದ್ದರು.