ಅಂತರ್ಜಲ ವೃದ್ಧಿಗಾಗಿ ಅಟಲ್ ಭೂಜಲ್ ಯೋಜನೆ

ಮಧುಗಿರಿ, ಜು. ೧೭- ನೀರಿಗಾಗಿ ರೈತರು ತೊಂದರೆಪಡುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ಅಟಲ್ ಭೂಜಲ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅಟಲ್ ಭೂಜಲ ಯೋಜನೆಯ ರಾಷ್ಟ್ರೀಯ ಕಾರ್ಯಕ್ರಮ ನಿರ್ವಹಣಾ ಕಚೇರಿಯ ಸಂವಹನ ತಜ್ಞ ರಾಘವೇಂದ್ರಸಿಂಗ್ ಹೇಳಿದರು.
ತಾಲ್ಲೂಕಿನ ಬಡವನಹಳ್ಳಿ, ಚಂದ್ರಗಿರಿ, ಡಿ.ವಿ.ಹಳ್ಳಿ ಮತ್ತು ಕೊಂಡವಾಡಿ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಈ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಮುಖ್ಯ ಉದ್ದೇಶದಿಂದ ಕೆರೆ ಹಾಗೂ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುವುದು. ಜಮೀನುಗಳಲ್ಲಿ ಮಳೆಯ ನೀರು ಹೊರ ಹೋಗದಂತೆ ತಡೆಯಲು ಬದುಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ದಿಗೆ ಆಧ್ಯತೆ ನೀಡಲಾಗುತ್ತಿದೆ. ಈ ಯೋಜನೆ ರೈತರಿಗೆ ಸಾಕಷ್ಟು ವರದಾನವಾಗಲಿದೆ ಎಂದರು. ಈ ಸಂದರ್ಭದಲ್ಲಿ ಕೃಷಿ ತಜ್ಞರಾದ ಬಿ.ಇ. ಗುರುಶಿವ, ಡಬ್ಲು, ಎಲ್.ಎ. ಆರ್.ಎಸ್. ಸಂಸ್ಥೆಯ ನಿರ್ದೇಶಕರಾದ ವೇಣುಗೋಪಾಲ್, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.