ಅಂತರ್ಜಲ ಮಟ್ಟ ವೃದ್ಧಿ; ರೈತರ ಚಟುವಟಿಕೆಗಳಿಗೆ ಮರು ಜೀವ

ಗೌರಿಬಿದನೂರು, ಏ,೨೮- ತಾಲ್ಲೂಕಿನ ಮರಳೂರು ಕೆರೆಗೆ ಎಚ್.ಎನ್. ವ್ಯಾಲಿ ನೀರು ಹರಿಯುತ್ತಿರುವ ಕಾರಣ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಭೇಟಿ ನೀಡಿ ಪೂಜೆ ಸಲ್ಲಿಸಿ ನೀರನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಸುಮಾರು ೪-೫ ವರ್ಷಗಳ ಸತತ ಪ್ರಯತ್ನದಿಂದ ಈ ಭಾಗದ ಜನತೆಗೆ ನೀಡಿದ್ದ ಭರವಸೆಯ ಮೇರೆಗೆ ಎಚ್.ಎನ್ ವ್ಯಾಲಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಅಂತರ್ಜಲ ಮಟ್ಟ ವೃದ್ಧಿಯಾಗಿ ಭಾಗಶಃ ರೈತರ ಕೃಷಿ ಚಟುವಟಿಕೆಗಳಿಗೆ ಮರುಜೀವ ಬರಲಿದೆ.
ರೈತರು ಅಪಪ್ರಚಾರಗಳಿಗೆ ಕಿವಿಗೊಡದೆ ತಮ್ಮ ಜಮೀನಿನ ಸಮೀಪದಲ್ಲಿರುವ ಕೆರೆಗಳಿಗೆ ನೀರು ಹರಿದ ಬಳಿಕ ಬೋರ್ ವೆಲ್ ಗಳಲ್ಲಿನ ನೀರಿನ ಪ್ರಮಾಣವನ್ನು ಪರೀಕ್ಷಿಸಿಕೊಂಡು ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ವ್ಯವಸ್ಥೆಯ ಮೂಲಕ ಮಿತವಾಗಿ ತಾಂತ್ರಿಕ ಪದ್ದತಿಯ ಬೇಸಾಯಕ್ಕೆ ಮುಂದಾಗಬೇಕಾಗಿದೆ. ಸುಮಾರು ೯೦೦ ಕೋಟಿ ರೂಗಳ ಅನುದಾನದಲ್ಲಿ ರೂಪಿಸಲಾಗಿದ್ದ ಎಚ್.ಎನ್ ವ್ಯಾಲಿ ಯೋಜನೆಯು ಸಫಲತೆ ಕಂಡಿದ್ದು, ಮುಂದುವರಿದ ಭಾಗವಾಗಿ ಹಂತಹಂತವಾಗಿ ತಾಲ್ಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುವುದು.
ಬೆಂಗಳೂರಿನ ಹೆಬ್ಬಾಳ- ನಾಗವಾರದಿಂದ ಹರಿಯುವ ಸಂಸ್ಕರಿಸಿದ ತ್ಯಾಜ್ಯಾ ನೀರು ಎರಡು ಹಂತದಲ್ಲಿ ಸಂಸ್ಕರಣೆಯಾಗಿ ಕಣಿವೆ ಮೇಲಿನ ಧರ್ಮರಾಯನ ಕೆರೆಗೆ ಹರಿದು ಅಲ್ಲಿಂದ ಸುಮಾರು ೪-೫ ಕಿ.ಮೀ ವರೆಗೆ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿಯಿಂದ ಕಾಲುವೆ ಮೂಲಕ ಹರಿದು ಶ್ರೀನಿವಾಸ ಸಾಗರ ಸೇರುತ್ತದೆ.
ಅಲ್ಲಿಂದ ಸುಮಾರು ೨೨ ಕಿ.ಮೀ ಉತ್ತರ ಪಿನಾಕಿನಿ ನದಿಯಲ್ಲಿ ಪೈಪ್ ಮೂಲಕ ಹರಿದು ನಗರಕ್ಕೆ ಸಮೀಪವಿರುವ ಕಿಂಡಿ ಅಣೆಕಟ್ಟು ಬಳಿಗೆ ಹರಿಯುತ್ತದೆ. ಅಲ್ಲಿಂದ ಪುನಃ ೭ ಕಿ.ಮೀ ಕಾಲುವೆ ಮೂಲಕ ಹರಿದು ಮರಳೂರು ಕೆರೆಗೆ ನೀರು ಸೇರುತ್ತಿದೆ. ಇದರಿಂದಾಗಿ ತ್ಯಾಜ್ಯ ನೀರು ಎರಡು ಬಾರಿ ವೈಜ್ಞಾನಿಕವಾಗಿ ಸಂಸ್ಕರಿಸುವ ಜತೆಗೆ ಭೂಮಿಯಲ್ಲಿ ಹರಿದು ಬರುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂಬುದನ್ನು ಜನತೆ ಅರಿಯಬೇಕಾಗಿದೆ ಎಂದು ಹೇಳಿದರು.
ಮತ್ತೆರಡು ಯೋಜನೆಯಡಿಯಲ್ಲಿ ನೀರು ;
ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ರೈತರ ಬದುಕು ದುಸ್ತರವಾಗಿದೆ. ಇದಕ್ಕಾಗಿ ಆರಂಭಿಕ ಹಂತವಾಗಿ ಎಚ್.ಎನ್ ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸುವ ಪ್ರಯತ್ನ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ವೃಷಭಾವತಿ ನೀರನ್ನು ತುಮಕೂರು, ಕೊರಟಗೆರೆ, ದೊಡ್ಡಬಳ್ಳಾಪುರ ಮಾರ್ಗವಾಗಿ ತಾಲ್ಲೂಕಿನ ಹೊಸೂರು ಹೋಬಳಿಯ ಕೆರೆಗಳಿಗೆ ನೀರು ಹರಿಯಲಿದೆ. ಉಳಿದಂತೆ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿರುವ ಎತ್ತಿನಹೊಳೆ ಯೋಜನೆಯ ಮೂಲಕ ಮುಂದಿನ ೨-೩ ವರ್ಷದಲ್ಲಿ ಶಾಶ್ವತ ನೀರಾವರಿ ಯೋಜನೆ ತಾಲ್ಲೂಕಿಗೆ ಲಭ್ಯವಾಗಲಿದೆ. ಇದರಿಂದ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ಕೆರೆಗೆ ನೀರು, ಸ್ಥಳೀಯ
ರೈತರ ಅಪಸ್ವರ ;
ಎಚ್.ಎನ್ ವ್ಯಾಲಿ ನೀರು ತಾಲ್ಲೂಕಿನ ಮರಳೂರು ಕೆರೆಗೆ ಹರಿಯಲಿದೆ ಎಂದು ಕಳೆದ ೨-೩ ವರ್ಷಗಳ ಹಿಂದೆಯೇ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆರೆಗಳಲ್ಲಿನ ಹೂಳು ಎತ್ತುವ ಹಾಗೂ ಅದರಲ್ಲಿನ ನಿರುಪಯುಕ್ತ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೋಟ್ಯಂತರ ರೂಗಳ ಅನುದಾನದಲ್ಲಿ ಸ್ಥಳೀಯ ಮುಖಂಡರ ಹಾಗೂ ಗುತ್ತಿಗೆದಾರರ ನೇತೃತ್ವದಲ್ಲಿ ಮರಳೂರು ಕೆರೆಯನ್ನು ಸ್ವಚ್ಛಗೊಳಿಸಲಾಗಿದೆ. ಆದರೆ ಇದೀಗ ಕೆರೆಗೆ ಎಚ್.ಎನ್. ವ್ಯಾಲಿ ನೀರು ಕೆರೆಗೆ ಹರಿಯುತ್ತಿದ್ದು, ಕೆರೆಯ ಬಹುತೇಕ ಭಾಗದಲ್ಲಿ ಸೀಮೆಜಾಲಿ ಗಿಡಗಳು ಬೆಳೆದು ನಿಂತಿವೆ. ಇದರಿಂದ ನೀರಿನ ಪ್ರಮಾಣ ತಿಳಿಯುವುದಿಲ್ಲ.
ಅಲ್ಲದೆ ಕೆರೆಯ ಆಳ ಮತ್ತು ಅಂಚುಗಳು ತಿಳಿಯದಂತಾಗಿದೆ, ಗುತ್ತಿಗೆದಾರರು ಸ್ಥಳೀಯ ಮುಖಂಡರುಗಳ ಒತ್ತಡಕ್ಕೆ ಮಣಿದು ಪೂರ್ಣ ಪ್ರಮಾಣದ ಕಾಮಗಾರಿ ನಡೆಸದ ಕಾರಣ ಒಂದೆರಡು ವರ್ಷದಲ್ಲೆ ಕೆರೆಯಲ್ಲೆ ಮತ್ತೆ ಸೀಮೆಜಾಲಿ ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಅಲ್ಲದೆ ಗ್ರಾಮಸ್ಥರು ಕೆರೆ ತುಂಬಿದ ಮೇಲೆ ಸಂಭ್ರಮದಿಂದ ಆಚರಿಸುವ ತೆಪ್ಪೋತ್ಸವ ಮಾಡಲು ಸಾಧ್ಯವಾಗುವುದಿಲ್ಲ, ಇದನ್ನು ಪ್ರಶ್ನಿಸುವ ನೈತಿಕತೆ ಜನತೆಗೆ ಇಲ್ಲದಂತಾಗಿದೆ ಎಂದು ಸ್ಥಳೀಯ ರೈತರು ಅಪಸ್ವರ ಎತ್ತಿದ್ದರು ಎಂದು ಹೇಳಿದರು.
ಇದೇ ವೇಳೆ ಮುಖಂಡರಾದ ಎಚ್.ಎನ್.ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ನಾಗರಾಜ್, ವೆಂಕಟರಮಣ, ಮೂರ್ತಿ, ಸೇಟು, ಬಾಬು, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳಾದ ಶ್ರೀನಿವಾಸರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.