ಅಂತರ್ಜಲ ಬಳಸಲು ಪರವಾನಿಗೆ ಕಡ್ಡಾಯ:

ಚಿತ್ರದುರ್ಗ,ಏ.29; ಚಿತ್ರದುರ್ಗ ಜಿಲ್ಲೆಯಲ್ಲಿ ಅಂತರ್ಜಲ ಬಳಸುವ ಕೈಗಾರಿಕೆ, ಗಣಿ ಸಂಸ್ಥೆಗಳು ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಸುವ ಸಂಸ್ಥೆಗಳು ಕಡ್ಡಾಯವಾಗಿ ಅಂತರ್ಜಲ ಪ್ರಾಧಿಕಾರದಿಂದ ಪರವಾನಿಗೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾರ್ಗಸೂಚಿಗಳ ಅನ್ವಯ ಪರವಾನಿಗೆ ಪಡೆಯದ ಕೈಗಾರಿಕೆಗಳ ಸಂಸ್ಥೆಗಳು, ಗಣಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಸುವ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಹಿರಿಯ ಭೂವಿಜ್ಞಾನಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಂತರ್ಜಲ ಕಚೇರಿ ಭೂವಿಜ್ಞಾನಿಗಳು ಮತ್ತು ಪೊಲೀಸ್ ಇಲಾಖೆ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸದೇ ಕೊಳವೆಬಾವಿ ಕೊರೆಯುವ ರಿಗ್ ವಾಹನಗಳ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ವಿ.ಬಸಂತ್, ಪೊಲೀಸ್ ಇಲಾಖೆ ಅಧಿಕಾರಿಗಳು, ಪರಿಸರ ಅಧಿಕಾರಿಗಳು, ಬೆಸ್ಕಾಂ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಭೂವಿಜ್ಞಾನಿಗಳು ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿದರು.