ಅಂತರಾಷ್ಟ್ರೀಯ ಸಂಸ್ಥೆಯಿಂದ ಉಚಿತ ಬೇಸಿಗೆ ಶಿಬಿರ

ಕೋಲಾರ, ಏ. ೨೭-ಅಗಸ್ತ್ಯ ಅಂತರಾಷ್ಟ್ರೀಯ ಸಂಸ್ಥೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದರ ಜತೆಗೆ ಬೇಸಿಗೆಯಲ್ಲೂ ಮಕ್ಕಳಿಗೆ ಉಚಿತವಾಗಿ ಶಿಬಿರ ನಡೆಸುವ ಮೂಲಕ ಮಕ್ಕಳ ಸೃಜನಶೀಲತೆಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕಿನ ಸುಗಟೂರು ಗ್ರಾಮದ ಸಬರಮತಿ ಪ್ರೌಢಶಾಲೆ ಆಡಳಿತಾಧಿಕಾರಿ ಬಿ.ವೆಂಕಟೇಶ್ ತಿಳಿಸಿದರು.
ಶಾಲೆಯ ಆವರಣದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಸಂಸ್ಥೆ ಹಮ್ಮಿಕೊಂಡಿರುವ ೨೦ ದಿನಗಳ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ವರ್ಷ ಸುಡು ಬೇಸಿಗೆಯಿಂದಾಗಿ ಮಕ್ಕಳ ವಿವಿಧ ಚಟುವಟಿಕೆಗಳಿಗೆ ಅಡ್ಡಿಯಾಗಿದೆ, ಮಕ್ಕಳು ಮನೆಯಲ್ಲೇ ಕೂರುವಂತಾಗಿದೆ ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಕ್ರಿಯಾಗೊಳಿಸುವ ಅಗಸ್ತ್ಯ ಅಂತರಾಷ್ಟ್ರೀಯ ಸಂಸ್ಥೆಯ ಪ್ರಯತ್ನಕ್ಕೆ ಅಭಿನಂದಿಸಿದ ಅವರು, ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿರುವ ಸಂದರ್ಭದಲ್ಲಿ ಮಕ್ಕಳಿಗೆ ನೆರಳಿನಲ್ಲೇ ಅವರಿಗೆ ಖುಷಿ ನೀಡುವ ವಿವಿಧ ತರಬೇತಿ ನೀಡುತ್ತಿದ್ದು, ಅವರ ಮುಂದಿನ ಬದುಕಿಗೆ ಸಹಕಾರಿಯಾಗಲಿದೆ ಎಂದರು.
ಗ್ರಾಮೀಣ ಮಕ್ಕಳಲ್ಲಿಯೂ ಅನೇಕ ಪ್ರತಿಭೆಗಳಿವೆ, ಅವರಿಗೆ ಅಗತ್ಯ ತರಬೇತಿ, ಪ್ರೊತ್ಸಾಹ ಸಿಕ್ಕರೆ ಅವರಲ್ಲಿನ ಕಲೆ ಹೊರತರಲು ಸಹಕಾರಿಯಾಗಲಿದ್ದು, ಇಂತಹ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಕ್ರಿಯಾಶೀಲತೆ ವೃದ್ದಿಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.
ಶಿಬಿರದಲ್ಲಿ ಮಾರ್ಗದರ್ಶಕರಾಗಿ ಅಗಸ್ತ್ಯ ಅಂತರಾಷ್ಟ್ರೀಯ ಸಂಸ್ಥೆಯ ಏರಿಯಾ ಲೀಡ್ ಆದ ಆನಂದಪ್ಪ ಮಾತನಾಡಿ, ಸದರಿ ಶಿಬಿರದಲ್ಲಿ ೧೪೦ ವಿದ್ಯಾರ್ಥಿಗಳು ದಿನಕ್ಕೆ ಬೆಳಿಗ್ಗೆ ೯:೩೦ ರಿಂದ ೧೧:೩೦ ಗಂಟೆ ಹಾಗೂ ೧೨ ರಿಂದ ೨ ಗಂಟೆಯವರೆಗೆ ಎರಡು ಗುಂಪುಗಳಾಗಿ ವಿಂಗಡಿಸಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಶಿಬಿರದಲ್ಲಿ ಮಕ್ಕಳಿಗೆ ರಚನಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಪೇಪರ್ ಕಟಿಂಗ್, ಚಾಕ್ ಆರ್ಟ್, ಲಿಪ್ ಆರ್ಟ್, ಸ್ಟ್ರಾ ಪೈಪ್ ಮೂಲಕ ಲೋ ಕಾಸ್ಟ್ ಮಾಡೆಲ್ಸ್, ಕ್ಲೇ ಮಾಡ್ಲಿಂಗ್, ಥರ್ಮಾಕೋಲ್ ಮಾಡೆಲ್ಸ್, ಥಂ ಪೇಂಟಿಂಗ್, ಜೀರೋ ಕಾಸ್ಟ್ ಮಾಡೆಲ್ಸ್, ಹೊರಾಗಂಣ ಕ್ರೀಡೆಗಳು ಹಾಗೂ ಇನ್ನಿತರ ಚಟುವಟಿಕೆಗಳು ಮತ್ತು ಮನರಂಜನಾ ಆಟಗಳನ್ನು ಆಡಿಸುವ ಮೂಲಕ ಮಕ್ಕಳಿಗೆ ಉತ್ಸಾಹದ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಶಿಬಿರದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಕೆ.ಎಸ್.ಹರೀಶ್ ಕುಮಾರ್, ತರಬೇತಿ ಶಿಕ್ಷಕರಾದ ರಜನಿ, ಸುರೇಶ್ ತರಬೇತಿ ನೀಡುತ್ತಿದ್ದಾರೆ.
ಶಿಬಿರಕ್ಕೆ ಶಿಕ್ಷಣ ಸಂಯೋಜಕ ಪವಾಡ ಬಯಲು ತಜ್ಞ ಕೆ.ಶ್ರೀನಿವಾಸ್, ಭೇಟಿ ನೀಟಿ ಮಕ್ಕಳಿಗಾಗಿ ನಡೆಸುತ್ತಿರುವ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳು ಇದರ ಸದುಪಯೋಗ ಪಡೆಯಲು ಕರೆ ನೀಡಿದರು.
ಶಿಬಿರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪಿ ದೊಡ್ಡಾರೆಡ್ಡಿ, ಶಿಕ್ಷಕರಾದ ಕೃಷ್ಣಮೂರ್ತಿ ಇದ್ದರು.