ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ


ಬಾಗಲಕೋಟೆ,ಮೇ 13 : ಪ್ರತಿ ವರ್ಷ ಮೇ-6 ರಿಂದ ಮೇ-12 ರವರೆಗೆ “ನರ್ಸಸ್ ವೀಕ್” ಎಂದು ಆಚರಿಸಲಾಗುತ್ತದೆ. ಮೇ-12 ನೇ ದಿನವನ್ನು ಅಂತರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಅಲ್ಲದೇ ಈ ದಿನವು ಶುಶ್ರೂಷಾ ವೃತ್ತಿಯ ಜನಕಿ ಪ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮದಿನವೂ ಹೌದು. ಶುಶ್ರೂಷಕರು ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದ್ದು, ರೋಗಿಗಳ ಆರೈಕೆಯಲ್ಲಿ ಶುಶ್ರೂಷಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ. ಅಲ್ಲದೇ ದಿನದ 24 ಘಂಟೆಯೂ ರೋಗಿಗಳ ಸೇವೆಯಲ್ಲಿ ನಿರತರಾಗಿರುತ್ತಾರೆ. ಪ್ರಸ್ತುತ ದಿನಗಳಲ್ಲಿ ಇವರ ಸೇವೆ ಆಸ್ಪತ್ರೆಗೆ ಮಾತ್ರ ಸೀಮಿತವಾಗಿರದೇ, ವಿವಿಧ ವಿಭಾಗಗಳಾದ ಸಂಶೋಧನಾ ಕೇಂದ್ರಗಳು, ಶಾಲೆ, ಕಾರ್ಖಾನೆ, ಸಮುದಾಯ ಇತ್ಯಾದಿ ಕ್ಷೇತ್ರಗಳಲ್ಲಿಯೂ ಸಹ ಸಕ್ರೀಯರಾಗಿರುತ್ತಾರೆ. ಇತ್ತೀಚಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಶುಶ್ರೂಷಕ ಎಂಬ ಪದನಾಮವನ್ನು ಶುಶ್ರೂಷಾಧಿಕಾರಿ ಎಂದು ಬದಲಾಯಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಆರೋಗ್ಯಸೇವಕರು ಭಗವಂತನ ಇನ್ನೊಂದು ರೂಪವೆಂದು ಬಣ್ಣಿಸಿದ್ದಾರೆ. ಆದಾಗ್ಯೂ ನಮ್ಮ ದೇಶದಲ್ಲಿ ಶುಶ್ರೂಷಾಧಿಕಾರಿಗಳ ಕೊರತೆಯ ಬಗೆಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸತತ ಎರಡೂ ವರ್ಷದಿಂದ ನಡೆದ ಕೋರೊನಾ ರೋಗಿಗಳ ಆರೈಕೆಯಲ್ಲಿ ತಮ್ಮ ಕುಟುಂಬದ ಪರಿವೆ ಇಲ್ಲದೆ ಹಗಲಿರುಳು ಸಲ್ಲಿಸುತ್ತಿರುವ ಸೇವೆ ಅವಿಸ್ಮರಣಿಯವಾದದ್ದು. ಬಲ್ಲ ಮೂಲಗಳ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ 10,000 ಜನಸಂಖ್ಯೆಗೆ ಕೇವಲ 17 ಶುಶ್ರೂಷಾಧಿಕಾರಿಗಳ ಸೇವೆ ಲಭ್ಯವಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತೀರಾ ಕಡಿಮೆ ಅನುಪಾತವಾಗಿದೆ ಎಂಬುದು ಕಳವಳಕಾರಿ ವಿಷಯ.
ಇಂದಿನ ಪರಿಸ್ಥಿತಿಯಲ್ಲಿ ಎಲ್ಲರೂ ಕೊರೊನಾ ಭಯದಿಂದ ದೂರ ಓಡುತ್ತಿದ್ದರೆ, ಶುಶ್ರೂಷಾಧಿಕಾರಿಗಳು ಮಾತ್ರ ಧೈರ್ಯದಿಂದ ಕೊರೊನಾ ಓಡಿಸಲು ಅದರ ಕಡೆಗೆ ಧಾವಿಸಿ ಜನರ ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ. ಅಲ್ಲದೇ ಈಗಿನ ಪರಿಸ್ಥಿತಿಯಲ್ಲಿ ಕೊರೊನಾ ಪೀಡಿತ ರೋಗಿಗಳ ಹತ್ತಿರ ತಮ್ಮ ಕುಟುಂಬಸ್ಥರೇ ಹೋಗಲು ಹಿಂಜರಿಯುವ ಸಮಯದಲ್ಲಿ ಅಂತಹ ರೋಗಿಗಳಿಗೆ ಮಾನಸಿಕ ಸ್ಥೈರ್ಯ ಹಾಗೂ ಆತ್ಮವಿಶ್ವಾಸ ತುಂಬುತ್ತಾ, ಅವರ ಆರೈಕೆ ಮಾಡುವ ಶುಶ್ರೂಷಾಧಿಕಾರಿಗಳು ರೋಗಿಗಳ ಪಾಲಿಗೆ ದೇವರ ಸಮಾನರಾಗಿದ್ದಾರೆ.
ಶುಶ್ರೂಷಾಧಿಕಾರಿಗಳ ಪಾತ್ರ ಆರೋಗ್ಯ ಸೇವೆಯಲ್ಲಿ ಎಷ್ಟು ಮಹತ್ತರವಾಗಿದೆಯೆಂದು ಈ ಕೊರೊನಾ ಉದ್ಭವಿಸುವ ಪರಿಸ್ಥಿತಿಯಲ್ಲಿ ವಿಶ್ವಕ್ಕೆ ತಿಳಿದುಬಂದಿದೆ. ಇಂತಹ ಪರಿಸ್ಥಿತಿಗಳು ಮುಂದೆಯೂ ಕಾಣಿಸಿಕೊಳ್ಳಬಹುದು. ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ ಶುಶ್ರೂಷಾಧಿಕಾರಿಗಳ ಮಹತ್ವವನ್ನು ತಿಳಿದು “ವಿಶ್ವದ ಭವಿಷ್ಯದ ಆರೋಗ್ಯ ರಕ್ಷಣೆಗೆ ಶುಶ್ರೂಷಾಧಿಕಾರಿಗಳೇ ಧ್ವನಿ” ಎಂಬ ನುಡಿಯನ್ನು ಈ ವರ್ಷದ ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ ಅಂಗವಾಗಿ ಘೋಷಿಸಿದೆ.
ಕೊರೊನಾ ಮಹಾಮಾರಿಯಲ್ಲಿ ಜೀವದ ಹಂಗು ತೊರೆದು ಯೋಧರಂತೆ ಕಾರ್ಯ ನಿರ್ವಹಿಸಿ, ತಾಯಿಯಂತೆ ಆರೈಕೆ ಮಾಡಿ, ಮಾನಸಿಕ ಸ್ಥೈರ್ಯ ತುಂಬಿ ರೋಗವನ್ನು ಗುಣಪಡಿಸುವ ಇವರ ಸೇವೆಗೆ ಬೆಲೆ ಕಟ್ಟಲಾಗದು. ಇಂತಹ ಸಂದರ್ಭದಲ್ಲಿ ಮಾತೃ ಹೃದಯದ ದಾದಿಯರಿಗೊಂದು ಸಲಾಂ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ . ಸಂಘದ ಸಜ್ಜಲಶ್ರೀ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ದಿಲೀಪ್ ಎಸ್. ನಾಟೆಕರ್ ಅವರ ಮುಂದಾಳತ್ವದಲ್ಲಿ ಸರಳವಾಗಿ ಎಲ್ಲರ ನಡುವೆ ಅಂತರ ಕಾಯ್ದುಕೊಂಡು ಅಂತರಾಷ್ಟ್ರೀಯ ಶುಶ್ರೂಷಾ ದಿನವನ್ನು ದಿ.12 ರಂದು ಆಚರಿಸಲಾಯಿತು.