ಅಂತರಾಷ್ಟ್ರೀಯ ಮಾತೃಭೂಮಿ ದಿನಾಚರಣೆ

ಮುಧೋಳ, ಏ.26: ಪ್ರತಿ ವರ್ಷ ಏಪ್ರೀಲ್ ಮಾಹೆಯಲ್ಲಿ ಅಂತರಾಷ್ಟ್ರೀಯ ಮಾತೃಭೂಮಿ ದಿನ ಆಚರಿಸಲಾಗುತ್ತದೆ. ನಮ್ಮ ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿರುತ್ತದೆ. ಇದರ ತೀವ್ರ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಪಂಚಾದಾದ್ಯಂತ ಈ ದಿನವನ್ನು ಆಚರಿಸುತ್ತೇವೆ ಎಂದು ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶೆ ಗೀತಾಮಣಿ ಹೇಳಿದರು.
ಅವರು ನಗರದ ಕೋರ್ಟ್ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಮಹತ್ವ ದಿನದ ಕುರಿತು ವಿವರಿಸಿದರು. ಭೂಮಿಯ ಸುರಕ್ಷತೆಯಲ್ಲಿ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ. ಹವಾಮಾನ ಬದಲಾವಣೆಯನ್ನು ಅಂಗೀಕರಿಸಲು ಮತ್ತು ಜಲ, ವಾಯು ಮಾಲಿನ್ಯ, ಅರಣ್ಯ ನಾಶ ಹಾಗೂ ಇನ್ನೂ ಹಲವಾರು ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಒಟ್ಟಾಗಿ ಮಾತನಾಡಬೇಕು. ಅಲ್ಲದೇ ಗಿಡಗಳನ್ನು ನೆಡುವ ಮೂಲಕ ಅವುಗಳನ್ನು ಉಳಿಸಿ, ಬೆಳೆಸಿ ಕಾಯ್ದುಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ದಿನದಿಂದ ದಿನಕ್ಕೆ ವಿನಾಶ ಅಂಚಿಗೆ ಬರುತ್ತಿದ್ದು, ಜನರು ಸ್ವಯಂಪ್ರೇರಣೆಯಿಂದ ಪರಿಸರ ರಕ್ಷಿಸುವ ಕಾರ್ಯ ಮಾಡಬೇಕೆಂದು ಅವರು ತಿಳಿಸಿದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಸಿದ್ದನಗೌಡ ಪಾಟೀಲ ಟಿ. ಮಾತನಾಡಿ, 1970 ಎಪ್ರೀಲ್ ತಿಂಗಳಲ್ಲಿ ಮೊದಲ ಬಾರಿಗೆ ಭೂಮಿ ದಿನವನ್ನು ಆಚರಿಸಲಾಯಿತೆಂದು ತಿಳಿಸಿ ಈ ಕುರಿತು ಸಮಗ್ರ ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ವ್ಹಿ.ಡಿ.ಕತ್ತಿ, ಅರಣ್ಯ ಇಲಾಖೆ ಅಧಿಕಾರಿ ಎಸ್.ಎಸ್.ತಳವಾರ, ಮತ್ತು ನ್ಯಾಯವಾದಿಗಳು ಹಾಗೂ ಅರಣ್ಯ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.