ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.14: ಗ್ರಾಮೀಣ ಭಾಗದ ಕೆಲವು ಜನರಲ್ಲಿ ಕಾನೂನಿನ ಅರಿವಿನ ಕೊರತೆ ಕಾರಣಕ್ಕಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು, ಅವರಿಗೆ ಸೂಕ್ತ ಕಾನೂನಿನ ಅರಿವು ಮತ್ತು ಸಲಹೆ ನೀಡಲು ಕಾನೂನಿನ ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀಶ ಹಾಜಿ ಸಯ್ಯದ್ ಹುಸೇನ್ ಸಾಬ್ ಯಾದವಾಡ ಹೇಳಿದರು.
ನಗರದ ಸಿಡಿಪಿಒ ಸಭಾಂಗಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಕಾನೂನು ಅರಿವು ಮತ್ತು ನೆರವು ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರತಿನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಕಾನೂನು ಅರಿವು ಪಡೆಯುವುದು ಅಗತ್ಯ, ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಿದೆ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ, ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೇ ಇರಬಹುದು, ಆದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜಾಗೃತಿ ಪಡೆಯಬೇಕು, ಈ ದೃಷ್ಟಿಯಿಂದ ಕಾನೂನು ಅರಿವು ಪಡೆಯಬೇಕು ಎಂದು ತಿಳಿಸಿದರು.
ಟಿ.ಎಚ್.ಒ ಡಾ.ಈರಣ್ಣ, ಸಿಡಿಪಿಒ ಪ್ರದೀಪ್ ಕುಮಾರ್ ಹಾಗೂ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.