
ಬ್ಯಾಡಗಿ,ಮಾ.9: ಸಮಾಜದ ಕೆಳಸ್ತರದಲ್ಲಿರುವ ಮಹಿಳೆಯರು ಸಬಲೀಕರಣಗೊಳ್ಳದಿದ್ದರೆ ಮಹಿಳಾ ಸಬಲೀಕರಣ ಯಶಸ್ವಿಯಾಗುವುದಿಲ್ಲ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಸೂಡಂಬಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ದೇಶಿಕಟ್ಟೆ ಕೆರೆಯ ಕಾಮಗಾರಿ ಸ್ಥಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ/ಸರಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಹೊರತುಪಡಿಸಿ ಉಳಿದೆಲ್ಲಾ ಮಹಿಳೆಯರು ಸ್ಥಳೀಯ ಗ್ರಾಪಂಗಳಿಗೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಚೀಟಿ ಪಡೆದುಕೊಂಡು ಕೆಲಸಕ್ಕೆ ಹಾಜರಾಗಲು ಇದೊಂದು ಉತ್ತಮ ಕಾರ್ಯವಾಗಿದೆ ಎಂದರು.
ಪಿಡಿಓ ಕೋಟೆಪ್ಪ ಪುಟ್ಟಪ್ಪನವರ ಮಾತನಾಡಿ, ಗ್ರಾಮದಲ್ಲಿ ನರೇಗಾ ಯೋಜನೆಯಡಿ ತಲಾ 10ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ದೇಶಿಕಟ್ಟೆ ಹಾಗೂ ಗೊರವನಕಟ್ಟೆ ಕೆರೆಗಳ ಹೂಳೆತ್ತುವ ಕಾಮಗಾರಿಗಳಲ್ಲಿ 356 ಜನ ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದು, ಇದರಲ್ಲಿ ಶೇ.50ರಷ್ಟು ಮಹಿಳೆಯರು ಪಾಲ್ಗೊಂಡಿರುವುದು ವಿಶೇಷವಾಗಿದೆ. ನರೇಗಾ ಯೋಜನೆಯ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವ ಮೂಲಕ ಅವರ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಸುರೇಶ ಮೆಣಸಿನಹಾಳ, ತಾಂತ್ರಿಕ ಸಹಾಯಕರಾದ ಸಂತೋಷ್, ಎಂ.ಸಿ.ಪ್ರಕಾಶ, ಕಾಯಕ ಮಿತ್ರ ಚನಬಸಮ್ಮ ಮಠದ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ನೀರು ಕುಡಿಯಲು ಕ್ಯಾನ್’ಗಳನ್ನು ಗ್ರಾಮ ಪಂಚಾಯತಿ ವತಿಯಿಂದ ವಿತರಿಸಿ ಜೊತೆಗೆ ಸಿಹಿ ತಿನಿಸುಗಳನ್ನು ಹಂಚಲಾಯಿತು.