ಅಂತರಾಷ್ಟ್ರೀಯ ಮಟ್ಟಕ್ಕೆ ಬ್ರಾಂಡ್ ಬೆಂಗಳೂರು ಪರಿಕಲ್ಪನೆ

ಬೆಂಗಳೂರು, ಜು. ೭- ನಗರ ಸಂಚಾರ ವ್ಯವಸ್ಥೆ , ಪರಿಸರ ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ ಹಾಗೂ ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಈ ಆಡಳಿತ ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆಯ ೯ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಬ್ರಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಿಳಿಸಿದ್ದಾರೆ.ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಬೆಂಗಳೂರನ್ನು ಸುರಕ್ಷತೆ ಹಾಗೂ ಅನುಕೂಲತೆಯ ಕೇಂದ್ರ ಬಿಂದುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತೆ ಮಾಡಲಾಗುವುದು ಎಂದರು.ಮಹಾನಗರ ವ್ಯಾಪ್ತಿಯಲ್ಲಿನ ೨೦ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು ೧೪೧೧ ಕೋಟಿ ಮೊತ್ತದ ಯೋಜನೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸ್ವಂತ ಸಂಪನ್ಮೂಲದಿಂದ ಅನುಷ್ಟಾನಗೊಳಿಸಲು ಅನುಮೋದನೆ ನೀಡಿದೆ. ಬರುವ ಮಾರ್ಚ್ ೨೬ ರೊಳಗೆ ಈ ಯೋಜನೆ ಜಾರಿಗೊಂಡು ನಗರದಲ್ಲಿ ಸುಸ್ಥಿರ ಜಲ ಮತ್ತು ಪರಿಸರ ಸಂರಕ್ಷಣೆಯಾಗಲಿದೆ ಎಂದರು.ಬೈಯ್ಯಪ್ಪನಹಳ್ಳಿಯಲ್ಲಿ ನೈರುತ್ಯ ರೈಲ್ವೆ ನಿರ್ಮಿಸಿರುವ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನನ್ನು ತಲುಪಲು ಮೆಟ್ರೋ ಹಾಗೂ ರಸ್ತೆ ಸಂಪರ್ಕವಿಲ್ಲದಿರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಗಂಭೀರವಾಗಿ ಪರಿಗಣಿಸಿ ೨೬೩ ಕೋಟಿ ರೂ. ವೆಚ್ಚದಲ್ಲಿ ಹೊಸ ಮೇಲುಸೇತುವೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ವೈಟ್ ಟಾಪಿಂಗ್
ಪದೇ ಪದೇ ದುರಸ್ತಿಯಾಗುವ ವೆಚ್ಚವನ್ನು ತಪ್ಪಿಸಲು ನಗರದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡುವ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ೨೦೧೬-೧೭ ಹಾಗೂ ೨೦೧೭-೧೮ರಲ್ಲಿ ನಿರ್ಮಿಸಿದ್ದ ೧೯೦ ಕಿಮೀ ವೈಟ್ ಟಾಪಿಂಗ್ ರಸ್ತೆಗಳು ಅತ್ಯುತ್ತಮ ಸ್ಥಿತಿಯಲ್ಲಿವೆ.
ಈ ಯೋಜನೆಯನ್ನು ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ೮೦೦ ಕೋಟಿ ವೆಚ್ಚದಲ್ಲಿ ೧೦೦ ಕಿಮೀ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಿರುವ ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಯೂ ೧೫ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಯೋಜನೆಗೆ ಎದುರಾದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸುಪ್ರೀಂಕೋರ್ಟ್ ಅನುಮತಿ ದೊರೆತಿದ್ದು, ಎಲ್ಲ ಕಾನೂನುತ್ಮಾತಕ ಬಗೆಹರಿಸಿ ತ್ವರಿತವಾಗಿ ಯೋಜನೆಯ್ನು ಅನುಷ್ಟಾನ ಗೊಳಿಸಲಾಗುವುದು ಎಂದು ತಿಳಿಸಿದರು.
ಆದ್ಯತಾ ಒತ್ತುವರಿ
ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿಯದಿರಲು ರಾಜಕಾಲುವೆಗಳ ಒತ್ತುವರಿ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಮಳೆ ಬಂದಾಗ ಪ್ರವಾಹ, ಮನೆಗಳಿಗೆ ನೀರು ನುಗ್ಗುವ ಅನಾಹುತಗಳು ಸಂಭವಿಸುತ್ತಿವೆ. ಈ ಸಮಸ್ಯೆ ನಿವಾರಿಸಲು ಕಂದಾಯ ಇಲಾಖೆ ಗುರುತಿಸಿರುವ ಒತ್ತುವರಿಗಳನ್ನು ಆದ್ಯತೆ ಮೇಲೆ ತೆರವುಗೊಳಿಸಲಾಗುವುದು ಎಂದರು.
ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಿ ನಗರದ ೯೭ ಲಕ್ಷ ಟನ್ ಹಳೆಯ ತ್ಯಾಜ್ಯವನ್ನು ಜೈವಿಕ ಗಣಿಗಾರಿಕೆ ಹಾಗೂ ಜೈವಿಕ ಪರಿಹಾರದ ಮೂಲಕ ಸಂಸ್ಕರಿಸಿ ಮುಂದಿನ ೫ ವರ್ಷಗಳ ಅವಧಿಯಲ್ಲಿ ೨೫೬ ಎಕರೆ ಭೂಮಿಯನ್ನು ಉದ್ಯಾನವನಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.