
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.13: ಆಗಸ್ಟ್ 12 ಅಂತರಾಷ್ಟ್ರೀಯ ಜಿನೀವಾ ಒಪ್ಪಂದ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ವಿಜಯಪುರ ಶಾಖೆ ಮತ್ತು ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಯೂತ್ ರೆಡ್‍ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಜಿನೀವಾ ದಿನಾಚರಣೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶರದ ರೊಡಗಿಯವರು ಮಾತನಾಡುತ್ತಾ – 16ನೆಯ ಶತಮಾನದಲ್ಲಿ ಯೂರೋಪದಲ್ಲಿ ನಡೆದ ಯುದ್ಧ ಸಂದರ್ಭದಲ್ಲಿ ಯುದ್ಧ ಗಾಯಾಳುಗಳ ಸೇವೆಗಾಗಿ ರೆಡ್‍ಕ್ರಾಸ್ ಸಂಸ್ಥೆಯ ಕೊಡುಗೆಯ ಬಗ್ಗೆ ಸಭೆಗೆ ತಿಳಿಸಿದರು. ಮಾನವೀಯ ಮೌಲ್ಯಗಳು ಯಾವುದೇ ಭೌಗೋಳಿಕವಾಗಿ ಯಾವುದೇ ದೇಶ, ಜಾತಿ, ಪಂಗಡವನ್ನು ಅವಲಂಬಿಸಿರುವುದಿಲ್ಲ. ಯುದ್ಧ ಗಾಯಾಳುಗಳನ್ನು ಹಾಗೂ ಯುದ್ಧ ಕೈದಿಗಳನ್ನು ಮಾನವೀಯತೆಯ ತಳಹದಿಯ ಮೇಲೆ ಅವರನ್ನು ಕಾಪಾಡುವುದು ಎಲ್ಲ ರಾಷ್ಟ್ರಗಳ ಕರ್ತವ್ಯವಾಗಬೇಕು ಎಂಬ ಉದ್ದೇಶವನ್ನು ಜಿನೀವಾ ಒಪ್ಪಂದ ಹೊಂದಿದೆ ಎಂದು ಅಭಿಪ್ರಾಯ ಪಟ್ಟರು. ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳು ಮಾತನಾಡಿ ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಂಸ್ಥೆಯ ಸಂಸ್ಥಾಪಕ ಡಾ|| ಹೆನ್ರಿ ಡ್ಯೂನಟ್‍ರವರ ಸೇವೆ ಹಾಗೂ ಜಿನೀವಾ ಒಪ್ಪಂದವನ್ನು ಕಾರ್ಯರೂಪಕ್ಕೆ ತರುವಲ್ಲಿ ವಹಿಸಿದ ಪಾತ್ರದ ಬಗ್ಗೆ ಅರ್ಥಪೂರ್ಣವಾಗಿ ಸಭೆಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ವಾಯ್. ತಮ್ಮಣ್ಣರವರು ವಹಿಸಿದ್ದರು. ಯೂತ್ ರೆಡ್ ಕ್ರಾಸ್ ಮುಖ್ಯಸ್ಥರಾದ ಡಾ|| ಕೆ.ಎ. ಪಾಟೀಲರವರು ಪ್ರಾಸ್ತಾವಿಕ ನುಡಿಗಳನ್ನು ನೀಡಿದರು. ಡಾ|| ಸವಿತಾ ಲಮಾಣಿಯವರು ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ.ಎಸ್.ಸಂದೇಶರವರು ಸ್ವಾಗತಿಸಿದರು ಮತ್ತು ಮೆಹಬೂಬಸಾಬ ಜಮಾದಾರ ವಂದನಾರ್ಪಣೆ ನೆರವೇರಿಸಿದರು.