ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ

ಸಂವಹನಕ್ಕಾಗಿ ಎಲ್ಲರೂ ಭಾಷೆಯನ್ನು ಬಳಸುತ್ತೇವೆ. ಆದರೆ ಶ್ರವಣ ದೋಷವಿರುವವರಿಗೆ ಭಾಷೆಯ ಬಳಕೆ ಸಾಧ್ಯವಾಗುವುದಿಲ್ಲ. ಅವರು ಭಾಷೆಗೆ ಬದಲಾಗಿ ಸಂಕೇತಗಳನ್ನು ಬಳಸುತ್ತಾರೆ. ಅಂದರೆ ಅವರ ಅನಿಸಿಕೆಗಳೆಲ್ಲವೂ ಸಂಕೇತಗಳ ಮೂಲಕವೇ ವ್ಯಕ್ತವಾಗಬೇಕಾಗಬಹುದು. ಆದರೆ ಇವು ಕೇವಲ ಭಾವಾಭಿನಯ (ಜೆಸ್ಚರ್) ಮಾತ್ರ ಅಲ್ಲ. ಭಾಷೆ ಯಾವ ರೀತಿ ವ್ಯಾಕರಣ ಬದ್ಧವಾಗಿರುತ್ತದೋ ಅದೇ ರೀತಿಯಲ್ಲಿ ಈ ಸಂಕೇತಗಳ ಬಳಕೆಗೂ ನಿಯಮ ಗಳಿರುತ್ತವೆ. ಆದ್ದರಿಂದಲೇ ಇವುಗಳನ್ನು ‘ಸಂಕೇತಭಾಷೆ’ ಎಂದು ಕರೆಯುತ್ತೇವೆ. ಅಂತಹ ಸಂಕೇತ ಭಾಷೆಯನ್ನು ಗೌರವಿಸುವ ಸಲುವಾಗಿ ಇಂದು ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿ ಪ್ರತಿವರ್ಷ ಸೆ ೨೩ರಂದು ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಆಚರಿಸಲು ಕರೆನೀಡಿದೆ. ಕಿವುಡ ಜನರ ಮಾನವ ಹಕ್ಕುಗಳ ಸಂಪೂರ್ಣ ಸಾಕ್ಷಾತ್ಕಾರದಲ್ಲಿ ಸಂಕೇತ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಗುರುತಿಸಿ ಆಚರಿಸಲಾಗುವುದು. ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಭಾಗವಾಗಿ ಸಂಕೇತ ಭಾಷೆಯನ್ನು ಸಂರಕ್ಷಿಸುವ ಇದು ಹೇಳುತ್ತದೆ. ೨೦೧೮ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನು ಆಚರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಸಂವಹನದ ಉದ್ದೇಶಕ್ಕಾಗಿ ಭಾಷೆಗೆ ಬದಲಾಗಿ ಶರೀರದ ಅಂಗಗಳನ್ನು ಬಳಸಿ ಮಾಡಲಾಗುವ ಭಾವಾಭಿನಯವೇ ಸಂಕೇತ ಭಾಷೆ. ಹಲವಾರು ಸಂದರ್ಭಗಳಲ್ಲಿ ಭಾಷೆಗೆ ಬದಲಾಗಿ ಸಂಕೇತಗಳನ್ನು ಮಾಹಿತಿ ಸಂವಹನಕ್ಕಾಗಿ ಬಳಸುತ್ತೇವೆ. ಎಲ್ಲೆಲ್ಲಿ ಸಂವಹನಕ್ಕಾಗಿ ಭಾಷೆಯ ಬಳಕೆ ಸಾಧ್ಯವಿಲ್ಲವೋ, ಬೇರೆ ಭಾಷೆಯನ್ನು ಬಳಸುತ್ತಾರೋ, ಎಲ್ಲೆಲ್ಲಿ ಮಾತಿನ ಮೂಲಕ ನಿರ್ದೇಶನ ನೀಡಲು ಸಾಧ್ಯವಿಲ್ಲವೋ ಅಲ್ಲೆಲ್ಲ ಸಂಕೇತ ಭಾಷೆಯ ಬಳಕೆ ಯಾಗುವುದು. ಇಷ್ಟೇ ಅಲ್ಲದೆ ಶ್ರವಣದೋಷವುಳ್ಳವರು, ಕೆಲವೊಂದು ಧಾರ್ಮಿಕಾಚರಣೆಗಳಲ್ಲಿ (ಸಿಸ್ಟೆರ್ಶನ್ ಸನ್ಯಾಸಿಗಳು) ಮ್ತು ಕೆಲವೊಂದು ಬುಡಕಟ್ಟು ಜನರು ಈ ಸಂಕೇತ ವ್ಯವಸ್ಥೆಯನ್ನು ಬಳಸುತ್ತಾರೆ. ಆದರೆ ಶ್ರವಣ ದೋಷವುಳ್ಳವರು ಬಳಸುವ ಸಂಕೇತ ವ್ಯವಸ್ಥೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.

ಪಾಶ್ಚಿಮಾತ್ಯರಲ್ಲಿ ಕ್ರಿಸ್ತಶಕದ ಆರಂಭದಿಂದಲೇ ಸಂಕೇತ ಭಾಷೆಯ ಬಳಕೆಯಿತ್ತೆಂದು ತಿಳಿದು ಬರುತ್ತದೆ. ಎರಡನೆಯ ಶತಮಾನದ ಉತ್ತರಾರ್ಧ ‘ಮಿಶ್ನಾ’ ಎಂದು ಕರೆಯಲಾಗುವ ಯಹೂದಿಗಳ ವಿಧಿಗಳು ಆಗಲೇ ಕಿವುಡರು ಕಾನೂನಿನ ಉದ್ದೇಶಗಳಿಗಾಗಿ ಸಂಕೇತಗಳನ್ನು ಬಳಸುತ್ತಿದ್ದು ದನ್ನು ತಿಳಿಸುತ್ತವೆ. ಒಬ್ಬ ಕಿವುಡ – ಮೂಕ ಸಂಕೇತಗಳ ಮೂಲಕ ವ್ಯವಹರಿಸ ಬಹುದು ಮತ್ತು ಅಂತಹ ಸಂಕೇತಗಳ ಮೂಲಕವೇ ಇತರರು ಅವರೊಡನೆ ವ್ಯವಹರಿಸಬಹುದು ಎಂದು ಅದರಲ್ಲಿ ತಿಳಿಸಲಾಗಿದೆ.

ಶ್ರವಣ ದೋಷವಿರುವವರು ಅಭಿವ್ಯಕ್ತಿಯ ಉದ್ದೇಶಕ್ಕೆ ಸಂಕೇತಗಳನ್ನು ಬಳಸುತ್ತಾರೆ. ಇದು ಕೇವಲ ಭಾವಾಭಿನಯ ಮಾತ್ರವಲ್ಲ. ಲಿಪಿ ರಹಿತ ಮತ್ತು ಲಿಪಿ ಸಹಿತ ಭಾಷೆಗಳಲ್ಲಿ ವ್ಯಾಕರಣ ವಿರುವಂತೆಯೇ ಸಂಕೇತಗಳ ಬಳಕೆಗೂ ಒಂದು ನಿಯಮವಿರುತ್ತದೆ. ಆದ್ದರಿಂದ ಇದನ್ನು ಸಂಕೇತ ಭಾಷೆ ಎಂದು ಕರೆಯುತ್ತಾರೆ. ಸಂಕೇತ ಭಾಷೆಯ ಗಂಭೀರ ಅಧ್ಯಯನವನ್ನು ಸಂಕೇತ ಶಾಸ್ತ್ರ ಎಂದು ಕರೆಯಬಹುದು. ಈ ಭಾಷೆ ಸಂಜ್ಞೆ ಮತ್ತು ಕೈಗಳನ್ನು ಬಳಸಿ ಮಾಡುವ ಚಿಹ್ನೆಗಳಿಂದ ಕೂಡಿದೆ.

ಮೂಗರು ತಮ್ಮ ದೇಹದ ಅಂಗಗಳ ಮೂಲಕ ಮಾಡುತ್ತಿದ್ದ ಕೆಲವು ಚಲನೆಗಳ ಬಗ್ಗೆ ಪ್ಲೇಟೋ ತನ್ನ ಕೃತಿ ಕ್ರೆಟಿಲಸ್‌ನಲ್ಲಿ ಉಲ್ಲೇಖಿಸಿದ್ದಾನೆ.
ಆದರೂ ಇದರ ಒಂದು ವ್ಯವಸ್ಥಿತವಾದ ಅಧ್ಯಯನ 1960 ರವರೆಗೂ ಬಂದಿರಲಿಲ್ಲ. ವೆಸ್ಟ್ ಅಮೆರಿಕನ್ ಪ್ಲೈನ್ ಇಂಡಿಯನ್ ಸಂಕೇತ ಭಾಷೆಯ ಬಗ್ಗೆ 1960 ರಲ್ಲಿ ಅಧ್ಯಯನವನ್ನು ನಡೆಸಿದ್ದು ತಿಳಿದುಬರುತ್ತದೆ. ಸ್ಟೋಕೋ (1960) ಅಮೆರಿಕನ್ ಸಂಕೇತ ಭಾಷೆಯ ಬಗ್ಗೆ ಒಂದು ಪುಸ್ತಕವನ್ನು ಹೊರತಂದನು. ಅವನು, ಪ್ರಯತ್ನಪೂರ್ವಕವಾಗಿ ಮಾಡುವ ಎಲ್ಲಾ ಸಂಕೇತಗಳಿಗೂ ಒಂದು ಗೊತ್ತಾದ ಚಲನೆ, ಸ್ಥಳ, ಕೈ ಆಕೃತಿ ಇರುತ್ತದೆಂದೂ, ಇದು ಭಾಷೆಯಲ್ಲಿನ ವ್ಯಾಕರಣದ ಉಪಘಟಕಗಳಂತೆ ಕೆಲಸ ಮಾಡುತ್ತವೆಂದೂ ತಿಳಿಸಿದ. ಅನಂತರದ ಎಲ್ಲಾ ಅಧ್ಯಯನಗಳಿಗೂ ಇದು ಮಾದರಿಯಾಯಿತು.

ಪ್ರಾರಂಭದಲ್ಲಿ ಸಂಕೇತಭಾಷೆಗೆ ಭಾಷೆಯ ನಂತರದ ಸ್ಥಾನವನ್ನು ನೀಡಲಾಗಿತ್ತು. ಟೈಲರ್ (1878) ಎಂಬುವವರು ಸಂಕೇತ ಭಾಷೆಯ ರಚನೆ ಹಾಗೂ ಕಿವುಡರ ಶಿಕ್ಷಣದಲ್ಲಿ ಅದರ ಪಾತ್ರದ ಬಗ್ಗೆ ಅಧ್ಯಯನ ನಡೆಸಿದರು. ಕಿವುಡರನ್ನು ಸಾಕಷ್ಟು ಅಧ್ಯಯನ ಮಾಡಿದ ಸ್ಟೌಟ್ (1899) ಎಂಬುವವರು ಸಂಕೇತದ ಮೂಲಕವೇ ಭಾಷೆ ಹುಟ್ಟಿರಬಹುದೆಂಬ ತಮ್ಮ ಸಿದ್ಧಾಂತವನ್ನು ಮಂಡಿಸಿದರು.

ಸಂಕೇತ ಭಾಷೆಯಲ್ಲಿ ಬಳಸುವ ಕೈಕರಣ ಮತ್ತು ಚಲನೆಯಲ್ಲಿ ಭಿನ್ನತೆ ಗೋಚರವಾಗುತ್ತದೆ. ಬ್ರಿಟನ್‍ನಲ್ಲಿ ಎರಡೂ ಕೈಗಳನ್ನು ಬಳಸಿದರೆ ಅಮೆರಿಕದಲ್ಲಿ ಒಂದೇ ಕೈಯನ್ನು ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಕೈಕರಣ ಒಂದೇ ಆಗಿದ್ದರೂ ಎರಡರಲ್ಲೂ ಅರ್ಥ ವ್ಯತ್ಯಾಸವಿರುತ್ತದೆ. ಸಾರ್ವತ್ರಿಕ ಸಂಕೇತಗಳು ಹಾಗೂ ವೈಯಕ್ತಿಕ ಸಂಕೇತಗಳೆಂದು ಎರಡು ಗುಂಪುಗಳಲ್ಲಿ ಸಂಕೇತಗಳನ್ನು ವಿಂಗಡಿಸಬಹುದು. ಯಾವ ಸಂಕೇತ ಎಲ್ಲರಲ್ಲಿಯೂ ಒಂದೇ ಭಾವನೆಯನ್ನು ಮೂಡಿಸುತ್ತದೆಯೋ ಅದು ಸಾರ್ವತ್ರಿಕ ಸಂಕೇತ. ಆದರೆ ಯಾವ ಸಂಕೇತ ಆಯಾ ವ್ಯಕ್ತಿಗೆ ಮಾತ್ರ ಅರ್ಥವಾಗುತ್ತದೆಯೋ ಅದು ವೈಯಕ್ತಿಕ ಸಂಕೇತ.