ಅಂತರರಾಜ್ಯ ಸಾರಿಗೆ ಶೀಘ್ರ ಆರಂಭ: ಸವದಿ

ಕಲಬುರಗಿ,ಸೆ.7-ಅಂತರರಾಜ್ಯ ಸಾರಿಗೆ ಆರಂಭಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯ ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರರಾಜ್ಯ ಸಾರಿಗೆ ಆರಂಭಕ್ಕೆ ಆಂಧ್ರ, ತೆಲಂಗಾಣ, ಗೋವಾ, ಪಾಂಡಿಚೇರಿ ರಾಜ್ಯಗಳಿಗೆ ಪತ್ರ ಬರೆಯಲಾಗಿದ್ದು, ಆಂಧ್ರದಿಂದ ಬಸ್ ಸಂಚಾರ ಆರಂಭವಾಗಿದ್ದು, ಉಳಿದ ರಾಜ್ಯಗಳಿಂದಲೂ ಬಸ್ ಸಂಚಾರ ಶೀಘ್ರವೇ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಕೊರಾನಾದಿಂದಾಗಿ ಸಾರಿಗೆ ಇಲಾಖೆಗೆ ಅತೀ ಹೆಚ್ಚು ನಷ್ಟವನ್ನು ಅನುಭವಿಸಿದೆ. ಕೊರೊನಾ ಭಯದಿಂದಾಗಿ ಜನ ಹೆಚ್ಚಾಗಿ ಓಡಾಡುತ್ತಿಲ್ಲ. ಶೇ.30-40ರಷ್ಟು ಜನ ಮಾತ್ರ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಇನ್ನೂ 60 ಪ್ರತಿಶತ ಜನ ಸಂಚರಿಸುತ್ತಿಲ್ಲ ಹೀಗಾಗಿ ಸಾರಿಗೆ ಇಲಾಖೆ ನಷ್ಟವನ್ನು ಅನುಭಿವಿಸುತ್ತಿದೆ. ಪ್ರತಿದಿನ ಇಲಾಖೆಗೆ 2 ರಿಂದ ಎರಡುವರೆ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಇದುವರೆಗೆ ಇಲಾಖೆಗೆ 2760 ಕೋಟಿ ರೂಪಾಯಿ ನಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಶ್ರಮವಹಿಸಿ ಮತ್ತು ಸೋರಿಗೆ ತಡೆಗಟ್ಟುವುದರ ಮೂಲಕ ಈ ನಷ್ಟವನ್ನು ಸರಿದೂಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ಇಲಾಖೆಯ ಯಾವುದೇ ನೌಕರರಿಗೆ ಕಡ್ಡಾಯವಾಗಿ ರಜೆ ತೆಗೆದುಕೊಳ್ಳುವಂತೆ ಹೇಳಿಲ್ಲ ಮತ್ತು ಈ ಸಂಬಂಧ ಸರ್ಕಾರದಿಂದಾಗಲಿ ಇಲ್ಲವೆ ಇಲಾಖೆಯಿಂದಾಗಲಿ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಸೇರಿದಂತೆ ಮತ್ತಿತರರು ಇದ್ದರು.