ಅಂತರಂಗ ಶುದ್ಧಿಯಿಂದ ದೇವರ ಅನುಗ್ರಹ

ಬೀದರ್:ಆ.28: ಅಂತರಂಗ ಶುದ್ಧಿಯಿಂದ ದೇವರ ಅನುಗ್ರಹವಾಗುತ್ತದೆ ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಶ್ರಾವಣ ಪ್ರಯುಕ್ತ 21 ದಿನಗಳ ನವಲಗುಂದ ನಾಗಲಿಂಗೇಶ್ವರ ಪುರಾಣದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅಂತರಂಗದ ಶುದ್ಧಿ ಬಹಿರಂಗ ಶುದ್ಧಿಗಿಂತಲೂ ಮಹತ್ವವಾದದ್ದು. ಸ್ನಾನದಿಂದ ಬಹಿರಂಗ ಶುದ್ಧಿ ಮಾತ್ರ ಆಗುತ್ತದೆ. ಅಂತರಂಗ ಶುದ್ಧಿಗಾಗಿ ಆಧ್ಯಾತ್ಮದ ಮೊರೆ ಹೋಗಬೇಕಾಗುತ್ತದೆ. ಶರಣರು, ಸಂತರ ವಾಣಿ ಆಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಬಸವಾದಿ ಶರಣರು ತಮ್ಮ ವಚನಗಳಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿ ಕುರಿತು ಮನಮುಟ್ಟುವಂತೆ ವಿವರಿಸಿದ್ದಾರೆ. ಮನದ ಮೈಲಿಗೆ ತೊಳೆಯುವ ವಿಧಾನವನ್ನೂ ತಿಳಿಸಿದ್ದಾರೆ ಎಂದು ಹೇಳಿದರು.

ಶ್ರಾವಣ ಇಡೀ ವರ್ಷದಲ್ಲೇ ಪವಿತ್ರ ಮಾಸ. ಶ್ರವಣ ಎಂದರೆ ಆಲಿಸುವುದು. ಕಾರಣ, ಭಕ್ತರು ಈ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು. ಮಾನವ ಜನ್ಮ ಕರುಣಿಸದ ಭಗವಂತನನ್ನು ಸ್ಮರಿಸಬೇಕು. ದಾನ ಸೇರಿ ಸತ್ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಸೂರ್ಯಕಾಂತ ಬಿರಾದಾರ ಉದ್ಘಾಟಿಸಿದರು. ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಧನ್ನೂರ ಠಾಣೆ ಪಿಎಸ್‍ಐ ವಿಶ್ವರಾಧ್ಯ, ಕರವೇ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಪಾಟೀಲ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಠ, ಪ್ರಮುಖರಾದ ಶಿವಶಂಕರ ಬೆಮಳಗಿ, ಬಸವರಾಜ ಕಾರಬಾರಿ ಬೀರಿ(ಬಿ), ರಮೇಶ ಪ್ರಭಾ, ಮಾಣಿಕ ಬಿರಾದಾರ, ರಾಜು ಕುಂಬಾರ, ವಿಜಯಕುಮಾರ ಪಂಚಾಳ ಮೊದಲಾದವರು ಇದ್ದರು. ಧನರಾಜ ಪಾಟೀಲ ನಿರೂಪಿಸಿದರು.

ಇದಕ್ಕೂ ಮುನ್ನ ರಾಚೋಟೇಶ್ವರ ಕತರ್ುೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ವಿಶೇಷ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.