ಅಂತರಂಗದ ಅಂತಃಸತ್ವದ ಆಚರಣೆಯೇ ಶರಣ ಸಂಸ್ಕøತಿ

ಕಲಬುರಗಿ:ಅ.30:”ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ಭಕ್ತಿಗೆ ಬೀಡಾದದ್ದು 36 ವರ್ಷ. ಈ ಅವಧಿಯಲ್ಲಿ ಸತ್ಯಕ್ಕನಂತಹ ಕಸಗುಡಿಸುವವಳೂ ಆನುಭಾವಿಕ ನೆಲೆಯಲ್ಲಿ ವಚನಗಳನ್ನು ಬರೆದು ಮಾದರಿಯಾಗಿದ್ದಾಳೆ. ಅಕ್ಕಮಹಾದೇವಿ ಎನ್ನಲ್ಲಿ ಏನುಂಟು ಎಂದು ಎನ್ನ ಅಂಗೈಯಲ್ಲಿ ಇಂಬುಗೊಂಡೆ? ಎಂದು ಚೆನ್ನಮಲ್ಲಿಕಾರ್ಜುನನ್ನು ಪ್ರಶ್ನಿಸಿ ಆಧ್ಯಾತ್ಮಿಕ ಬದುಕಿಗೆ ಚಿಲುಮೆಯಾಗಿದ್ದಾಳೆ. ಬಸವಣ್ಣನವರ ಮಾರ್ಗದರ್ಶನದಲ್ಲಿ ಅನೇಕ ಶರಣ ಶರಣೆಯರು ಆನುಭಾವಿಕ ನೆಲೆಯಲ್ಲಿ ತಮ್ಮ ಅಂತಃ ಸತ್ವದ ಬೆಳಕನ್ನು ಜಗತ್ತಿಗೆ ಪರಿಚಯಿಸಿದರು. ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ದಿ: 28-08-2022 ರವಿವಾರ ಸಂಜೆ 6.00 ಗಂಟೆಗೆ ವಚನ ಶ್ರಾವಣ -2022 “ಶರಣ ಸಂಸ್ಕøತಿ” ಉಪನ್ಯಾಸ ಮಾಲೆಯ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಬೆಂಗಳೂರು ಬೇಲಿಮಠ ಸಂಸ್ಥಾನದ ಅಧ್ಯಕ್ಷರಾದ ಶಿವಾನುಭವ ಚರಮೂರ್ತಿ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳು ಹನ್ನೆರಡನೆಯ ಶತಮಾನದ ಶರಣಗಣ ಲಿಂಗದ ಪ್ರತಿ ಬಿಂಬದಂತೆ ಇದ್ದರು. ಕಾಯಕ ದಾಸೋಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಡೆ-ನುಡಿ ಶುದ್ಧವಿಟ್ಟುಕೊಂಡು ಲೋಕಕ್ಕೆ ಮಾದರಿಯಾಗಿ ಬದುಕಿದ್ದರು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಶ್ರಾವಣಮಾಸ ಒಂದು ತಿಂಗಳ ಪರ್ಯಂತ ಆನ್‍ಲೈನ್ ಅರಿವಿನ ಮನೆಯ ಕಾರ್ಯಕ್ರಮದಲ್ಲಿ “ಶರಣ ಸಂಸ್ಕøತಿ” ಕುರಿತು ಉಪನ್ಯಾಸನೀಡಿದ್ದ ಶ್ರೀ ಅಶೋಕ ಬಸಪ್ಪ ಬರಗುಂಡಿ ಗದಗ ಇವರಿಗೆ ಬಸವ ಸಮಿತಿಯಿಂದ “ಬಸವ ವಿಭೂಷಣ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಶ್ರೀ ಬರಗುಂಡಿ ಅವರು ಮಾತನಾಡುತ್ತ ಅದ್ಭುತವೆನ್ನುವಂತಹ ಬಸವ ಧರ್ಮದ ಆಲೋಚನೆಗಳನ್ನು ನಾವೆಲ್ಲರೂ ಅರಿಯಬೇಕಾಗಿದೆ. ಬದುಕಿನ ಅಗತ್ಯಗಳು ಮತ್ತು ಆದ್ಯತೆಗಳನ್ನು ಹೆಣೆದುಕೊಂಡ ನಾವೆಲ್ಲಾ ಭ್ರಮಾಲೋಕದಲ್ಲಿ ಬದುಕುತ್ತಿದ್ದೇವೆ. ಇಂತಹ ಪ್ರಲೋಭನೆಗಳಿಂದಾಗಿ ಅಂತರಂಗದ ಸತ್ವವನ್ನು ಕಳೆದುಕೊಂಡ ಕಾರಣಕ್ಕಾಗಿ, ನಮ್ಮನ್ನು ನಾವು ಒಳಗೆ ಸಾಯಿಸಿಕೊಂಡು, ಪ್ರೀತಿಯನ್ನು ಕಳೆದುಕೊಂಡು ನಾವೆಲ್ಲ ಬಸವ ಧರ್ಮದಿಂದ ವಿಮುಖರಾಗಿದ್ದೇವೆ. ನಮ್ಮಲ್ಲಿ ಅಡಗಿದ ಸ್ವಪ್ರತಿಷ್ಠೆಯ ಅಹಂಕಾರವನ್ನು ಕಳೆಯದೆ ಶರಣರು ನಮಗೆ ಅರ್ಥವಾಗುವುದಿಲ್ಲ ಎಂದರು.

ಸಮಾರೋಪ ನುಡಿಗಳನ್ನಾಡಿದ ಡಾ. ವೀರಣ್ಣ ದಂಡೆಯವರು ಕಳೆದ ಹಲವಾರು ವರ್ಷಗಳಿಂದ ಕಲಬುರಗಿ ಬಸವ ಸಮಿತಿಯ ವಿಧಾಯಕ ಕಾರ್ಯಕ್ರಮಗಳ ಕುರಿತು ಮಾತನಾಡಿ ಕರೋನಾದಂತಹ ಕಷ್ಟಕರ ಸನ್ನಿವೇಶದಲ್ಲಿಯೂ ಆನ್‍ಲೈನ್ ಉಪನ್ಯಾಸಗಳನ್ನು ಏರ್ಪಪಡಿಸಿ ಜನರಿಗೆ ಆಧ್ಯಾತ್ಮಿಕ ಚಿಂತನೆಗಳ ಹೂರಣವನ್ನು ಉಣಬಡಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿಯವರು ಶ್ರಾವಣ ಮಾಸದ ಈ ಸಮಾರೋಪ ಸಮಾರಂಭ ಅಂತ್ಯವಲ್ಲ ಲಿಂಗಪ್ರಜ್ಞೆಯ ಆರಂಭ ಎಂದರು. ಬಸವ ಪ್ರಜ್ಞೆ, ವಚನ ಪ್ರಜ್ಞೆ ಮತ್ತು ಲಿಂಗಪ್ರಜ್ಞೆಗಳು ಜಾಗ್ರತವಾದಾಗ ಮಾತ್ರ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಈ ಬಗೆಯ ವ್ಯಕ್ತಿತ್ವ ನಮ್ಮೆಲ್ಲರದಾಗಬೇಕು ಎಂದರು.

ವೇದಿಕೆಯಲ್ಲಿ ತಮಿಳುನಾಡು ನಾಗಸಂದ್ರ ವಿರಕ್ತಮಠದ ಪೂಜ್ಯಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಪ್ರಧಾನ ಕಾರ್ಯದರ್ಶಿ ಬಂಡಪ್ಪ ಕೇಸೂರು, ಹಿರಿಯ ಸದಸ್ಯರಾದ ಡಾ. ಕೆ. ಎಸ್. ವಾಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ ಸ್ವಾಗಿತಿಸಿದರು. ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ ಶರಣು ಸಮರ್ಪಣೆ ಮಾಡಿದರು. ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರ್ವಹಿಸಿದರು.