ಅಂಡರ್‌-19 ಟಿ-20 ವಿಶ್ವಕಪ್‌: ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ಭಾರತ

ಪೊಟ್ಚೆಸ್ಟ್ರೂಮ್‌ (ದಕ್ಷಿಣ ಆಫ್ರಿಕಾ), ಜ.೨೯- ಇದೇ ಮೊದಲ ಬಾರಿಗೆ ನಡೆದ ಉದ್ಘಾಟನಾ ಅಂಡರ್‌-೧೯ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್‌ ಟೂರ್ನಿಯನ್ನು ಭಾರತ ಗೆದ್ದುಕೊಂಡಿದೆ. ಬೌಲರ್ಸ್‌ಗಳು ಪ್ರದರ್ಶಿಸಿದ ಅತ್ಯದ್ಬುತ ನಿರ್ವಹಣೆಯ ನೆರವಿನಿಂದ ಇಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಟೂರ್ನಿಯ ಫೈನಲ್‌ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದುಕೊಂಡು, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.


ಇದೇ ಮೊದಲ ಬಾರಿಗೆ ನಡೆದ ಟೂರ್ನಿಯ ಆರಂಭದಿಂದಲೂ ಭಾರತೀಯ ತಂಡ ಅಮೋಘ ನಿರ್ವಹಣೆ ನೀಡಿತ್ತು. ಅಲ್ಲದೆ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಗೆದ್ದುಕೊಂಡು ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟದ್ದರೆ ಅತ್ತ ಆಸ್ಟ್ರೇಲಿಯಾಗೆ ಸೋಲುಣಿಸುವ ಮೂಲಕ ಇಂಗ್ಲೆಂಡ್‌ ಫೈನಲ್‌ಗೇರಿತ್ತು. ಇನ್ನು ಫೈನಲ್‌ ಹಣಾಹಣಿಯಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಪಡೆ ಸಂಪೂರ್ಣ ವೈಫಲ್ಯ ಕಂಡಿತು. ಮುಖ್ಯವಾಗಿ ಭಾರತೀಯ ಬೌಲರ್‌ಗಳ ಸೂಕ್ತ ದಾಳಿಗೆ ಉತ್ತರ ನೀಡುವಲ್ಲಿ ಆಂಗ್ಲಪಡೆ ತಡಕಾಡಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ನಿಯಾಮ್‌ ಹಾಲೆಂಡ್‌ (೧೦) ಹಾಗೂ ರಾಯ್ನಾ ಮೆಕ್‌ಡೊನಾಲ್ಡ್‌ (೧೯) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಸರೆಯಾಗಿದ್ದರು. ಅಂತಿಮವಾಗಿ ೧೭.೧ ಓವರ್‌ಗಳಲ್ಲಿ ೬೮ ರನ್‌ಗಳ ಅತ್ಯಲ್ಪ ರನ್‌ಗೆ ಸರ್ವಪತನ ಕಂಡಿತು. ಭಾರತ ಪರ ಅಮೋಘ ದಾಳಿ ಸಂಘಟಿಸಿದ್ದ ತಿತಾಸ್‌ ಸಧು, ಅರ್ಚನಾ ದೇವಿ ಹಾಗೂ ಪರ್ಶ್ವಿ ಛೋಪ್ರಾ ತಲಾ ಎರಡು ವಿಕೆಟ್‌ ಪಡೆದು ಮಿಂಚಿದರು.
ಇನ್ನು ಗುರಿ ಬೆನ್ನತ್ತಿದ ಭಾರತ ಕೂಡ ಒಂದು ಹಂತದಲ್ಲಿ ೩.೪ ಓವರ್‌ಗಳಲ್ಲಿ ೨೦ ರನ್‌ಗೆ ಎರಡು ವಿಕೆಟ್‌ ಕಳಕೊಂಡು ಸಂಕಷ್ಟದಲ್ಲಿತ್ತು. ಶ್ವೇತಾ ಶೆರ್ಹಾವತ್‌ (೫) ಹಾಗೂ ನಾಯಕಿ ಶೆಫಾಲಿ ವರ್ಮಾ (೧೫) ನಿರ್ಗಮಿಸಿದ್ದು, ತಂಡಕ್ಕೆ ಕೆಲಹೊತ್ತು ಆತಂಕ ಮೂಡಿತ್ತು. ಆದರೆ ಮೂರನೇ ವಿಕೆಟ್‌ಗೆ ಸೌಮ್ಯಾ ತಿವಾರಿ (೨೪) ಹಾಗೂ ಗೊಂಗದಿ ತ್ರಿಶಾ (೨೪) ೪೬ ರನ್‌ಗಳ ಜೊತೆಯಾಟ ನಡೆಸಿ, ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ ೧೪ ಓವರ್‌ಗಳಲ್ಲಿ ಮೂರು ವಿಎಕಟ್‌ ನಷ್ಟಕ್ಕೆ ೬೯ ರನ್‌ ಗಳಿಸಿ, ಗೆಲುವು ಸಾಧಿಸಿತು. ಇಂಗ್ಲೆಂಡ್‌ ಪರ ಹನ್ಹಾ ಬೇಕರ್‌ ಒಂದು ವಿಕೆಟ್‌ ಪಡೆದರು. ಇನ್ನು ಗೆಲುವಿನ ಮೂಲಕ ಭಾರತ ಚೊಚ್ಚಲ ಅಂಡರ್‌-೧೯ ಟಿ-೨೦ ವಿಶ್ವಕಪ್‌ ಗೆದ್ದುಕೊಂಡ ಶ್ರೇಷ್ಠ ಸಾಧನೆಗೆ ಪಾತ್ರವಾಗಿದೆ. ಇನ್ನು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಿತಾಸ್‌ ಸಧು ಹಾಗೂ ಟೂರ್ನಿಯಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ ಇಂಗ್ಲೆಂಡ್‌ನ ಗ್ರೇಸ್‌ ಸ್ಕ್ರೀವನ್ಸ್‌ ಕ್ರಮಾವಾಗಿ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಬಾಕ್ಸ್‌
ಬಹುಮಾನ ಘೋಷಿಸಿದ ಬಿಸಿಸಿಐ
ಇನ್ನು ಚೊಚ್ಚಲ ಅಂಡರ್‌-೧೯ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ ಗೆದ್ದುಕೊಂಡ ತಂಡಕ್ಕೆ ಇದೀಗ ದೇಶದೆಲ್ಲೆಡೆಯಿದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿ ಜೈ ಷಾ ಅವರು ಮಹಿಳಾ ಟಿ-ಟ್ವೆಂಟಿ ತಂಡಕ್ಕೆ ಐದು ಕೋಟಿ ರೂ.ಗಳ ಬಹುಮಾನ ಮೊತ್ತ ಘೋಷಿಸಿದ್ದಾರೆ. ಇದು ಮೊತ್ತ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಹಂಚಿಕೆಯಾಗಲಿದೆ.