ಅಂಡರ್ ಪಾಸ್‌ಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚನೆ

ಬೆಂಗಳೂರು, ಜೂ.೧೪- ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಸಂಭವಿಸಿದ ಅಂಡರ್ ಪಾಸ್ ದುರಂತ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ಕೆಳಸೇತುವೆಗಳಲ್ಲಿ ತುರ್ತಾಗಿ ಸಿಸಿಟಿವಿ, ದೀಪಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗಾಲ ಹಿನ್ನೆಲೆ ಅದಕ್ಕೆ ಬೇಕಾದ ತಯಾರಿ ಕುರಿತು ಪ್ರತಿ ವರ್ಷವೂ ಎಂದಿನಂತೆ ವಿಶೇಷ ಸಭೆ ನಡೆಸಲಾಗುತ್ತಿದೆ.ಅದರಂತೆ ಇಂದೂ ಸಹ ಸಭೆ ನಡೆದಿದ್ದು, ಎಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಹಾಗೇ, ಪ್ರವಾಹ ಉಲ್ಬಣಗೊಳ್ಳುವ ಪ್ರದೇಶಗಳ ಮೇಲೆ ವಿಶೇಷ ನಿಗಾ ಇರಿಸುವಂತೆ ಹೇಳಿದ್ದೇನೆ ಎಂದರು.
ಇನ್ನೂ, ಕೆಳಸೇತುವೆಗಳಲ್ಲಿ ಮಳೆ ನೀರು ನಿಂತು ಉಂಟಾಗುವ ಅನಾಹುತ ಕುರಿತು ವಿಶೇಷ ಜಾಗೃತಿ ಇಟ್ಟುಕೊಂಡಿದ್ದು, ಕಡ್ಡಾಯವಾಗಿ ಕೆಳಸೇತುವೆಗಳಲ್ಲಿ ಸಿಸಿಟಿವಿ ಕ್ಯಾಮೆರಾ, ದೀಪ ಹಾಗೂ ನೀರು ಎಷ್ಟು ನಿಂತಿದೆ ಎಂದು ಸಾರ್ವಜನಿಕರು ಗುರುತಿಸಲು ಮೀಟರ್ ಅಳವಡಿಕೆ ಮಾಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ಜತೆಗೆ, ಕೆಳಸೇತುವೆಗಳ ಮಾಹಿತಿಯನ್ನು ಪಾಲಿಕೆ ವೆಬ್‌ಸೈಟ್‌ಗಳಲ್ಲಿ ಉಲ್ಲೇಖ ಮಾಡಲಾಗಿದ್ದು, ಬರೋಬ್ಬರಿ ೪೧ ಕೆಳಸೇತುವೆಗಳ ಮಾಹಿತಿಯನ್ನು ಸಾರ್ವಜನಿಕರು ಮುಕ್ತ ಪಡೆದುಕೊಳ್ಳಬಹುದು. ಎಲ್ಲಿ ಕಾಮಗಾರಿ ನಡೆಯುತ್ತಿದ್ದೇಯೋ, ಅಲ್ಲಿ ಹೋಗಿ ಸ್ಥಳ ಪರಿಶೀಲನೆ ಮಾಡಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಆಯುಕ್ತರು ನುಡಿದರು.