ಅಂಡರ್‍ಪಾಸ್‍ನಲ್ಲಿ ನೀರು: ಗ್ರಾಮಸ್ಥರಿಂದ ಅಧಿಕಾರಿಗೆ ತರಾಟೆ


ಹುಬ್ಬಳ್ಳಿ, ಡಿ 7: ಕಾರವಾರ ರಸ್ತೆಯಿಂದ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಿಸುವ ರಿಂಗ್ ರಸ್ತೆಯ ಅಂಡರ್‍ಪಾಸ್‍ನಲ್ಲಿ ಭಾರೀ ಮಳೆಗೆ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅಗ್ರಹಾರ ತಿಮ್ಮಸಾಗರ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ಕಾಮಗಾರಿ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮಕ್ಕೆ ಬರುವ ರಸ್ತೆಯ ಎರಡೂ ಕಡೆ ನೀರು ನಿಂತಿದೆ. ಎರಡೂ ಬದಿಯಿಂದ ಹೊಲದ ಮಣ್ಣು ಸಹಿತ ನೀರು ಹರಿದು ಕೆಸರು ತುಂಬಿ ವಾಹನಗಳು ಸಿಲುಕಿಕೊಂಡಿವೆ. ಹಲವರು ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದನ್ನು ನೋಡಿಯೂ ಕೂಡ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆಸರು ತೆಗೆದು ಉತ್ತಮ ರಸ್ತೆ ಮಾಡಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಮಟ್ಟದಲ್ಲಿಯೇ ಅಂಡರ್‍ಪಾಸ್ ರಸ್ತೆಯನ್ನು ಏರಿಸಿ ನೀರು ಕೆಳಗೆ ಹರಿದು ಹೋಗಲು ದಾರಿ ಮಾಡಿಕೊಡಬೇಕೆಂದು ಒತ್ತಾಯಿಸಲಾಯಿತು. ಪ್ರಾಧಿಕಾರದ ಯೋಜನಾ ನಿರ್ದೇಶಕರು, ತಹಶೀಲದಾರ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೆಟ್ಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಬೇಕೆಂದು ಆಗ್ರಹಿಸಲಾಯಿತು. ಗ್ರಾಮಸ್ಥರ ಅಹವಾಲುಗಳನ್ನು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಮೇಲ್ವಿಚಾರಕರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ತಾಪ ಮಾಜಿ ಅಧ್ಯಕ್ಷೆ ಗೌರಮ್ಮ ಹರಿಜನ, ಗ್ರಾಪಂ ಸದಸ್ಯರಾದ ಸಹದೇವ ಮಾಳಗಿಮನಿ, ಮಲ್ಲವ್ವ ಜಮೀಹಾಳ, ಮಾಜಿ ಸದಸ್ಯ ಸಿದ್ದಪ್ಪ ಕೋಟಿ, ದೇವೇಂದ್ರಪ್ಪ ಹಂಚಿನಮನಿ, ವಿರುಪಾಕ್ಷಪ್ಪ ಮೇಟಿ, ಚನ್ನಬಸಪ್ಪ ಸೌತಿಕಾಯಿ, ಮೋನಪ್ಪ ಹೊನ್ನಮ್ಮನವರ ಮೊದಲಾದವರು ಉಪಸ್ಥಿತರಿದ್ದರು.