ಅಂಡರ್‌ಪಾಸ್ ಬಳಿ ಬಾಕಿಯಾದ ಲಾರಿ: ರಸ್ತೆ ಸಂಚಾರಕ್ಕೆ ಅಡ್ಡಿ


ಮಂಗಳೂರು, ನ.೧೭- ಎಂಆರ್‌ಪಿಎಲ್ ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊತ್ತು ಸಾಗುತ್ತಿದ್ದ ಬೃಹತ್ ಗಾತ್ರದ ಎರಡು ಲಾರಿಗಳು ನಗರದ ಪಡೀಲ್ ಅಂಡರ್ ಪಾಸ್ ಕೆಳಗೆ ಸಂಚರಿಸಲಾಗದೆ ಅರ್ಧದಲ್ಲೇ ಬಾಕಿಯಾದ ಘಟನೆ ನಡೆದಿದೆ. ಪರಿಣಾಮ ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಗುಜರಾತಿನಿಂದ ಎಂಆರ್‌ಪಿಎಲ್ ಕಂಪೆನಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊತ್ತ ಎರಡು ಬೃಹತ್ ಲಾರಿಗಳು ಸೋಮವಾರ ರಾತ್ರಿಯ ವೇಳೆ ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಅಂಡರ್ ಪಾಸ್ ಬಳಿ ತಲುಪಿದೆ. ಲಾರಿಯಲ್ಲಿದ್ದ ಸಾಮಗ್ರಿಗಳು ಬೃಹತ್ ಗಾತ್ರದಲ್ಲಿರುವ ಕಾರಣ ಪಡೀಲ್ ಅಂಡರ್ ಪಾಸ್ ನಲ್ಲಿ ಸಂಚರಿಸಲಾಗದೆ ಅಂಡರ್ ಪಾಸ್ ಬಳಿ ನಿಂತಿವೆ. ಇದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಹಿಂದೆಯೂ ಹಲವು ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವೈಜ್ಞಾನಿಕ ಅಂಡರ್ ಪಾಸ್ ರಚನೆಯೇ ಇದಕ್ಕೆ ಕಾರಣ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶಗಳು ವ್ಯಕ್ತವಾಗಿವೆ.