ಅಂಜಲಿ ಅಂಬಿಗೇರ್ ಹತ್ಯೆಗೈದ ಆರೋಪಿಗೆ ಎನ್ಕೌಂಟರ್ ಮಾಡಲು ಒತ್ತಾಯ

ಬೀದರ್: ಮೇ 19ಃ ಹುಬ್ಬಳ್ಳಿಯ ವಿರಾಪೂರ್ ಓಣೆಯ ನಿವಾಸಿ ಅಂಜಲಿ ಅಂಬಿಗೇರ್ ಅವರನ್ನು ಹತ್ಯೆಗೈದ ಆರೋಪಿಗೆ ಎನ್ಕೌಂಟರ್ ಮಾಡಬೇಕು ಹಾಗೂ ಮೃತಳ ಕುಟುಂಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಜಂಟಿಯಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.

ಸಲ್ಲಿಸಿದ ಮನವಿ ಪತ್ರವನ್ನು ಪತ್ರಿಕಾ ಪ್ರಕಟಣೆಗೆ ಬಿಡುಗಡೆ ಮಾಡಿ, ಹಂತಕ ವಿಶ್ವನಾಥ ಅಲಿಯಾಸ್ ಗೀರಿಶ್ ಸಾವಂತ (21) ಹುಬ್ಬಳ್ಳಿಯ ಎಲ್ಲಾಪೂರ್ ಓಣಿಯ ನಿವಾಸಿಯಾಗಿದ್ದು, ವೀರಾಪೂರ್ ಓಣಿಯ ನಿವಾಸಿಯಾಗಿರುವ ಅಂಜಲಿ ಅಂಬಿಗೇರ್ ಅವಳ ಮನೆಗೆ ತೆರಳಿ ಕದ ಬಡೆದು ಬಾಗಿಲು ತೆರೆಯುತ್ತಿದ್ದಂತೆ ಅವಳನ್ನು ಜಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಇಡಿ ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಗಳು ಪದೆ ಪದೆ ನಡೆಯುತ್ತಿರುವುದು ಆತಂಕದ ವಿಷಯವಾಗಿದೆ ಎಂದಿದ್ದಾರೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಇತ್ತಿಚೆಗೆ ನೇಹಾ ಹಿರೇಮಠ ಅವಳ ಕೊಲೆಯ ಘಟನೆ ಮಾಸುವ ಮುನ್ನವೇ ಮತ್ತೊಂದು ಹೀನಾಯ ಘಟನೆ ನಡೆದಿರುವುದು ದುರಂತದ ಸಂಗತಿಯಾಗಿದೆ. ಸರಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ ಅಲ್ಲದೇ ಕೊಲೆ ಹಂತಕರನ್ನು ಮತ್ತು ಬಲತ್ಕಾರಿಗಳನ್ನು ಎನ್ಕೌಂಟರ್ ಮಾಡುವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೇಶ ಸ್ವಾತಂತ್ರ್ಯ ಪಡೆದು 76 ವರ್ಷಗಳು ಕಳೆದರು ಇಂದಿಗೂ ಸ್ತ್ರಿಯರಿಗೆ ಜೀವ ರಕ್ಷಣೆ ಸಿಗದಿರುವುದು ವಿಷಾದನೀಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮಕ್ಕೆ ಮುಂದಾಗದಿದ್ದರೇ ಮುಂಬರುವ ದಿನಗಳಲ್ಲಿ ಟೋಕರೆ ಕೋಳಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯಿಂದ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುನೀಲ ಖಾಸೆಂಪೂರ್, ಪ್ರ-ಕಾರ್ಯದರ್ಶಿ ಪಾಂಡುರಂಗ ಗುರುಜಿ, ಶಿವರಾಜ ಬಂಬುಳಗಿ, ರಮೇಶ ಖಾಸೆಂಪೂರ್, ಶನ್ಮೂಖಪ್ಪಾ ಶೇಕಾಪೂರ್, ಸಿದ್ದು ಖಾಸೆಂಪೂರ್, ಅರುಣಕುಮಾರ ಅರ್ಕಿ, ಲಾಲಪ್ಪಾ ಕೋರಿ, ಕಿರಣ ಕೌಠಾ, ವಿಶ್ವನಾಥ ಕೌಠಾ, ನಾಗೇಶ ವಾಲಿಕಾರ್, ಶ್ರೀಕಾಂತ ಬಸಂತಪೂರೆ ಇತರರು ಇದ್ದರು.