ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಬದ್ಧ

ಗಂಗಾವತಿ ಏ 17 : ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸನ್ನದ್ಧವಾಗಿದೆ ಎಂದು ಅರಣ್ಯ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಣಿ ಹೇಳಿದರು.
ತಾಲೂಕಿನ ಅಂಜನಾದ್ರಿ ಹಾಗೂ ಪಂಪಾ ಸರೋವರದ ಶ್ರೀ ವಿಜಯ ಲಕ್ಷ್ಮೀ ದೇವಿ ದರ್ಶನ ಪಡೆದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂಜನಾದ್ರಿ ಪರ್ವತಕ್ಕೆ ಮೂಲ ಸೌಕರ್ಯ ಒದಗಿಸಲು ಈಗಾಗಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 20 ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಟ್ಟಿದ್ದು,ವೃದ್ಧರು, ಅಶಕ್ತರು ಬೇಟ್ಟವೇರಲು ರೋಪವೇ,ಯಾತ್ರಿ ನಿವಾಸ ಸೇರಿ ಮತ್ತಿತರರ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.
ವನ್ಯಜೀವಿಗಳಿಗೆ ಕಾಡಲ್ಲಿ ನೀರು,ಆಹಾರದ ಕೊರತೆಯಿಂದ ನಾಡಿನತ್ತ ನುಗ್ಗುತ್ತಿವೆ. ಈ ಕೊರತೆ ನೀಗಿಸಲು ಅರಣ್ಯ ಪ್ರದೇಶಗಳಲ್ಲಿ ಹಲಸು, ನೇರಳೆ ಸೇರಿದಂತೆ ವಿವಿಧ ತಳಿಯ ಹಣ್ಣಿನ ತಳಿಯ ಸಸಿಗಳನ್ನು ನೆಡುವ ಯೋಜನೆ ಇದೆ. ಅಲ್ಲದೇ,ಕಾಡಿನಲ್ಲಿ ಕುಡಿಯುವ ನೀರಿನ ಬವಣೆ ತೀರಿಸಲು ಸೋಲಾರ್ ಪ್ರೇರಿತ ಸ್ವಯಂ ಚಾಲಿತ ಪಂಪ ಸೈಟ್ ಬಳಕೆಗೆ ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ತಜ್ಞರೊಂದಿಗೆ ಚರ್ಚಿಸಿ ಜಾರಿಗೆ ತರಲಾಗುವುದು.
ಈಗಾಗಲೇ ಈ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಸೇರಿ ಪರಿಸರ ಪ್ರೇಮಿಗಳು ಸಹಕಾರ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಸಸಿ ನೆಟ್ಟು,ಪ್ರಾಣಿಗಳ ಆಹಾರದ ಕೊರತೆ ನೀಗಿಸಲಾಗುವುದು ಎಂದರು.
ಈ ಭಾಗದಲ್ಲಿ ಹೆಚ್ಷಿರುವ ಚಿರತೆ, ಕರಡಿ ಸೇರಿ ಪ್ರಾಣಿಗಳ ಧಾಮ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಅಂಜನಾದ್ರಿ ದೇಗುಲದ ಕೆಳಗೆ ಇರುವ ಪಾದಗಟ್ಟೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ವಿಶೇಷ ಪೂಜೆ ಸಲ್ಲಿಸಿದರು, ಬಳಿಕ ತಾಲೂಕು ಆಡಳಿತ ವತಿಯಿಂದ ಲಿಂಬಾವಳಿ ಅವರನ್ನು ಸನ್ಮಾನಿಸಲಾಯಿತು.
ನಂತರ ಅಂಜನಾದ್ರಿ ಬೆಟ್ಟದಿಂದ ಪಂಪಾ ಸರೋವರದ ಶ್ರೀ ವಿಜಯ ಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಬಳಿಕ ದೇಗುಲದ ಹೊರಗೆ ಕೋತಿಗಳಿಗೆ ಬಾಳೆಹಣ್ಣು, ಬೀಸ್ಕಟ್ ನೀಡಿ ಹಾರೈಕೆ ಮಾಡಿದರು, ಈ ವೇಳೆ ಸಚಿವರ ಪ್ರೀತಿ, ಕಾಳಜಿಗೆ ಮನಸೋತ ಕೋತಿವೊಂದು ಅವರ ಹೆಗಲೇರಿ ಆಹಾರ ತಿಂದಿದ್ದು ವಿಶೇಷವಾಗಿತ್ತು,
ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ಕಾಡಾ‌ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ತಹಸೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಮಾಜಿ ಜಿ‌ಪಂ ಸದಸ್ಯ ಸಿದ್ದರಾಮಸ್ವಾಮಿ, ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.