ಅಂಗೈಯಲ್ಲಿಯೇ ಆರೋಗ್ಯ : ಆಯುಷ್ ಚಿಕಿತ್ಸಾ ಹಾಗೂ ಆಹಾರ ಪದ್ದತಿಗಳೇ ಪರಿಹಾರ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ22: ಭಾರತೀಯ ಸಂಸ್ಕೃತಿಯಲ್ಲಿ ನಡೆದು ಬಂದ ಆಹಾರ ಹಾಗೂ ಚಿಕಿತ್ಸಾ ಪದ್ದತಿಗಳೇ ನಮ್ಮ ಇಂದಿನ ಸಮಸ್ಯೆಗಳಿಗೆ ಪರಿಹಾರವಾಗಿದ್ದು ಅವುಗಳನ್ನು ಮೈಗೂಡಿಸಿಕೊಂಡು ನಮ್ಮ ಜೀವನ ಕ್ರಮವನ್ನು ಬದಲಾಯಿಸಬಹುದು ಎಂದು ಹೊಸಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಹೇಳಿದರು.
ಸ್ಥಳೀಯ ರೋಟರಿ ಕ್ಲಬ್‍ನಲ್ಲಿ ಮಂಗಳವಾರ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಯುಷ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಪೋಷಣಾ ಮಾಸಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾರತೀಯ ಪದ್ದತಿ ಹಾಗೂ ಸಂಸ್ಕೃತಿಯಿಂದ ನಾವು ದೂರಹೋಗುತ್ತಿರುವುದು ನಮ್ಮ ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ, ಗರ್ಭೀಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಆಹಾರ ಸಾಮಾಗ್ರಿಗಳು ಮೌಲ್ಯಯುಕ್ತವಾಗಿದ್ದು ಇವುಗಳನ್ನು ನಿರಂತರ ಸೇವನೆಯಿಂದ ಆರೋಗ್ಯ ಪೂರ್ಣವಾಗಿರುವ ಜೊತೆ ಮಕ್ಕಳನ್ನು ಆರೋಗ್ಯ ಪೂರ್ಣವಾಗಿ ಬೆಳಸಿ ಸದೃಢರನ್ನಾಗಿಸಬಹುದು ಎಂದರು.  ಆರ್ಯುವೇದಿಕೆ ಪದ್ದತಿ ನಿಧಾನವಾದರೂ ಶಾಶ್ವತ ಪರಿಹಾರ ನೀಡಬಲ್ಲದಾಗಿದೆ ಆ ತಾಳ್ಮೆಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್ ಮಾತನಾಡಿ ಆರ್ಯುವೇದಿಕೆ ಚಿಕಿತ್ಸಾ ಪದ್ದತಿ ಮೊದಲಿನಿಂದಲೂ ತನ್ನದೆ ಆದ ಮಹತ್ವವನ್ನು ಹೊಂದಿದೆ. ನಾವು ತೋರಿದ ನಿರ್ಲಕ್ಷ್ಯೆ ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ, ನಮ್ಮ ಮನೆಯ ಆಹಾರ, ಹಾಗೂ ಸಾಂಪ್ರದಾಯಕ ಚಿಕಿತ್ಸೆಯ ಪದ್ದತಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗಿದ್ದು ಪೌಷ್ಠಿಕಾಹಾರ ಮಹಿಳೆಯರಲ್ಲಿರುವ ರಕ್ತಹೀನತೆ ತಡೆಗಟ್ಟಲು ಸಹಕಾರಿಯಾಗಲಿದೆ, ನಾವಿಂದ ಇಂಗ್ಲಿಷ್ ಪದ್ದತಿಯಲ್ಲಿ ನೀಡುವ ಮಾತ್ರೆಗಳೇ ಅಗತ್ಯವಿಲ್ಲಾವಾಗಬಲ್ಲದು, ನಾವು ನಮ್ಮ ಪದ್ದತಿಯನ್ನು ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಮತ್ತೆ ಬಂದಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಂಧೂ ಯಲಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರದ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳ ಪ್ರಯೋಜನ ಪಡೆಯುವ ಮೂಲಕ ಮಹಿಳೆಯರ ಹಾಗೂ ಮಕ್ಕಳ ಪ್ರಗತಿಯ ಜೊತೆ ದೇಶದ ಪ್ರಗತಿಗೆ ಕಾರಣವಾಗುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಗರ್ಭೀಣಿ ಮಹಿಳೆಯರಿಗೆ ಸೀಮಂತ ಹಾಗೂ ಕರೋನಾ ಮಹಾಮಾರಿಯ ಸಂದರ್ಭದಲ್ಲಿ ಸ್ವಯಂ ಸ್ಪೂರ್ತಿಯಿಂದ ಕಾರ್ಯನಿರ್ವಹಿಸಿದ ವಾರಿಯರ್ಸ್‍ಗಳಿಗೆ ಸನ್ಮಾನ ಮಾಡಲಾಯಿತು. ಸಹಾಯಕ ಶಿಶು ಅಭಿವೃದ್ದಿ  ಎಳೆನಾಗಪ್ಪ, ತೋಟಗಾರಿಕೆಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರ, ಆಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಮುನಿವಾಸುದೇವರೆಡ್ಡಿ ಆಯುಷ್ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳು ಚಿತ್ತವಾಡ್ಗಿ ವಲಯ 3ರ ಅಂಗವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಜರಿದ್ದರು.