ಅಂಗಾರೀಕಾ ಚತುರ್ಥಿ: ಸಿದ್ಧಿ ವಿನಾಯಕನ ದರ್ಶನಕ್ಕೆ ಹರಿದು ಬಂದ ಭಕ್ತರ ದಂಡು

ಬೀದರ: ನ.24:ನಗರದಿಂದ 25 ಕಿಲೋಮೀಟರ್ ದೂರದಲ್ಲಿ ತೇಲಂಗಾಣ ರಾಜ್ಯದ ಜಹೀರಾಬಾದ ತಾಲೂಕಿನ ರೇಜಂತಲ್ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಅಂಗಾರೀಕಾ ಸಂಕಷ್ಠ ಚತುರ್ಥಿ ಅಂಗವಾಗಿ ಆಂಧ್ರ ಪ್ರದೇಶ, ತೇಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಗಡಿ ಜಿಲ್ಲೆಗಳ ಸಹಸ್ರ ಭಕ್ತರು ಬೆಳಗ್ಗೆ 5 ಗಂಟೆಯಿಂದ ಸಿದ್ಧಿ ವಿನಾಯಕ ದೇವಸ್ಥಾನದಕ್ಕೆ ಆಗಮಿಸಿ ಗಣೇಶನ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಪುನಿತರಾದರು.

ರೇಜಂತಲ ಸಿದ್ಧಿ ವಿನಾಯಕ ದೇವಸ್ಥಾನ ಟ್ರಷ್ಟ ಅಧ್ಯಕ್ಷ ಸಂಗಯ್ಯ ರೇಜಂತಲ, ಪ್ರಧಾನ ಕಾರ್ಯದರ್ಶಿ ಅಲ್ಲಾಡಿ ನರಸಿಂಹಲು ಜಹೀರಾಬಾದ, ದಿಗಂಬರ ಪೋಲಾ, ಎನ್. ಆರ್. ರಾಜು ಮತ್ತು ಬಸವರಾಜ ರೇಜಂತಲ ಅವರ ನೇತೃತ್ವದಲ್ಲಿ ಮಂಗಳವಾರ ಅಂಗಾರಿಕಾ ಸಂಕಷ್ಟ ಚತುರ್ಥಿ ಅಂಗವಾಗಿ ರೇಜಂತಲ್ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ನಸುಕಿನ ಜಾವ 5 ಗಂಟೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡು ತಮ್ಮ ಇಷ್ಟ ದೇವರಾದ ರೇಜಂತಲ್ ಸಿದ್ಧಿ ವಿನಾಯಕನ ಮೂರ್ತಿ ಕಣ್ಣು ತುಂಬಿಕೊಂಡು ಧನ್ಯರಾದರು.

ಭಕ್ತರು ರೇಜಂತಲ್ ಸಿದ್ಧಿ ವಿನಾಯಕ ಮೂರ್ತಿಯ ದರ್ಶನ ಪಡೆದ ಬಳಿಕ ಭಕ್ತರು ದೇವಸ್ಥಾನದ ಆಡಳಿತ ಮಂಡಳಿಯಿಂದ ವಿಶೇಷವಾಗಿ ತಯ್ಯಾರಿಸಿದ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರೇಜಂತಲ ಸಿದ್ಧಿ ವಿನಾಯಕ ದೇವಸ್ಥಾನ ಟ್ರಷ್ಟನ ಅಶೋಕ ರೇಜಂತಲ್ ಅವರು ಮಾತನಾಡುತ್ತ, ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ಬರುತ್ತದೆ. ಮಂಗಳವಾರದಂದು ಬರುವ ಸಂಕಷ್ಟ ಅಂಗಾರಿಕಾ ಸಂಕಷ್ಟ ಚತುರ್ಥಿ ವಿಶೇಷವಾಗಿರುತ್ತದೆ. ಮಂಗಳವಾರದಂದು ಬರುವ ಅಂಗರೀಕಾ ಸಂಕಷ್ಟಹರಾ ಚತುರ್ಥಿ ದಿನದಂದು ಆಂಧ್ರ, ತೇಲಂಗಾಣ, ಮಹಾರಾಷ್ಟ್ರ. ಕರ್ನಾಟಕದ ಮತ್ತು ಗಡಿ ಭಾಗದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕ ಸಿದ್ದಿವಿನಾಯಕನ ದರ್ಶನಕ್ಕೆ ಸಾವಿರಾರು ಭಕ್ತಾದಿಗಳು ಬಂದು ಸಿದ್ಧಿ ವಿನಾಯಕನ ದರ್ಶನ ಪಡೆದು, ಮಹಾಪ್ರಸಾದ ಸ್ವೀಕರಿಸಿ ಪುನಿತರಾಗುತ್ತಾರೆ ಎಂದು ಹೇಳಿದರು.

ಇಲ್ಲಿ ಹರಕೆ ಹೊತ್ತ ಭಕ್ತರಿಗೆ ಮಕ್ಕಳು ಇಲ್ಲದವರಿಗೆ ಮಕ್ಕಳು, ನೌಕರಿ, ಮದುವೆ, ಸಂಸಾರದ ಕಲಹ ಸೇರಿದಂತೆ ಇತ್ಯಾದಿ ಸಮಸ್ಯೆಗಳು ದೂರು ಮಾಡುವ ಶಕ್ತಿ ದೇವರಲ್ಲಿದೆ. ಇಲ್ಲಿ ಹರಕೆ ಹೊತ್ತ ಅನೇಕ ಭಕ್ತರ ಇಷ್ಟಾರ್ಥಗಳು ರೇಜಂತಲ್ ಸಿದ್ಧಿ ವಿನಾಯಕ ದೇವರು ಈಡೇರಿಸಿದ್ದಾರೆ ಹರಕೆ ಹೊತ್ತ ಭಕ್ತರು ತಿಳಿಸುತ್ತಾರೆ ಎಂದು ಹೇಳಿದರು.

ಈ ವರ್ಷ 3 ಅಂಗಾರಿಕಾ ಸಂಕಷ್ಟ ಚತುರ್ಥಿ ಬಂದಿದ್ದು, ಮಾರ್ಚ 23, ಜುಲೈ 27 ಮತ್ತು ನವೆಂಬರ್ 23ರ ಅಂಗಾರಿಕಾ ಸಂಕಷ್ಟ ಚತುರ್ಥಿ ಈ ವರ್ಷದ 3ನೇ ಹಾಗೂ ಕೊನೆದಾಗಿದೆ. 23ರ ಅಂಗಾರಿಕಾ ಸಂಕಷ್ಟ ಚತುರ್ಥಿ ಅಂಗವಾಗಿ ರೇಜಂತಲ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೀದರ ವಿಭಾಗೀಯ ಕಚೇರಿಯ ಬೀದರ ಡಿಪೋದಿಂದ ಭಕ್ತರ ಸೌಲಭ್ಯಕ್ಕಾಗಿ 20 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಅಶೋಕ ರೇಜಂತಲ್ ತಿಳಿಸಿದ್ದಾರೆ.