ಅಂಗಾಂಗ ದಾನ ಅಭಿಯಾನ ನೂರಾರು ಜೀವ ಉಳಿಸಿದ ಟ್ರಾಮಾ ವಿಭಾಗ

ಸ್ಟಮಕ್- ಅಂಗಾಂಗ ದಾನ ದಿನ

ಬೆಂಗಳೂರು, ಆ.೩- ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದ ಟ್ರಾಮಾ ಮತ್ತು ಎಮೆರ್ಜೆನ್ಸಿ ಕೇರ್ ವಿಭಾಗ ಕಡಿಮೆ ಅವಧಿಯಲ್ಲಿಯೇ ಅಂಗಾಂಗ ದಾನದ ಬಗ್ಗೆ ಅಭಿಯಾನ ಮೂಡಿಸಿ ನೂರಾರು ಜೀವಗಳನ್ನು ಉಳಿಸಿ ಪ್ರಶಂಸೆಗೆ ಪಾತ್ರವಾಗಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಧೀನ ಆಸ್ಪತ್ರೆಯಲ್ಲಿ ಒಂದಾದ ಟ್ರಾಮಾ ಮತ್ತು ಎಮೆರ್ಜೆನ್ಸಿ ಕೇರ್ ವಿಭಾಗವು ಅಂಗಾಂಗ ದಾನ ಅಭಿಯಾನದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಕೇಂದ್ರಕ್ಕೇರಿದೆ.
ಸುಸರ್ಜಿತ ವೈದ್ಯಕೀಯ ಸೌಲಭ್ಯಗಳಿರುವ ಈ ಕೇಂದ್ರದಲ್ಲಿ ೧೨೫ ರಿಂದ ೧೫೦ ಪ್ರಾಣಾಪಾಯದ ಅಂಚಿನಲ್ಲಿದ್ದ ರೋಗಿಗಳಿಗೆ ಸಜೀವ ಅಂಗಗಳನ್ನು ಕಸಿ ಮಾಡಿ ಪುನರ್ ಜನ್ಮ ನೀಡುವ ಮೂಲಕ ದಾಖಲೆ ಬರೆಯಲಾಗಿದೆ. ಅದರಲ್ಲೂ ಅಪಘಾತಗಳಲ್ಲಿ ತೀವ್ರ ಗಾಯಗಳಾದವರಿಗೆ ಮೆದುಳು ನಿಷ್ಕ್ರಿಯಗೊಂಡವರಿಗೆ ದಿನದ ೨೪ ಗಂಟೆಗಳ ಕಾಲವೂ ಸೇವೆ ನೀಡಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್.ಎಸ್, ಪ್ರಪಥಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ತಿಳುವಳಿಕೆ ಅಂಗಗಳ ಮರು ಪಡೆವ ಕೇಂದ್ರ ಇದಾಗಿದ್ದು, ಭಾರತದಲ್ಲಿಯೇ ಇಂತಹ ಕೇಂದ್ರ ಎರಡನೇಯದಾಗಿದೆ. ಅಷ್ಟೇ ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಬಡರೋಗಿಗಳಿಗೆ ಅಂಗಾಂಗ ಕಸಿ ಮಾಡಲಾಗಿದೆ.
ಅಂಗಾಂಗ ದಾನ ನೀಡಲು ಒಪ್ಪಿದ ಕುಟುಂಬದವರ ಸಮ್ಮುಖದಲ್ಲಿ ದಾನಿಯ ಶವ ಹಸ್ತಾಂತರದ ವೇಳೆ ವೈದ್ಯರು, ಸಿಬ್ಬಂದಿ, ಆಡಳಿತ ವರ್ಗದವರೆಲ್ಲರೂ ಗೌರವ ಪೂರ್ವಕವಾಗಿ ಪ್ರಶಂಸೆ ವ್ಯಕ್ತ ಪಡಿಸಲಾಗುವುದು. ದಾನಿಯ ಊರಿಗೆ ಕೊಂಡ್ಯೊಯುವ ಉಚಿತ ಸಾರಿಗೆ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಟ್ರಾಮಾ ಮತ್ತು ಎಮೆರ್ಜೆನ್ಸಿ ಕೇರ್ ಕೇಂದ್ರ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿದ್ದು ೨೦೦ ಹಾಸಿಗೆ, ೩೮ ಐ.ಸಿ.ಯು ಹಾಸಿಗೆ, ೪೦ ತೀವ್ರ ನಿಗಾ ಹಾಸಿಗೆಗಳ ಸೌಲಭ್ಯವಿದ್ದು, ಆರು ಅಂತಸ್ತುಗಳುಳ್ಳ ಈ ಕೇಂದ್ರದಲ್ಲಿ ಅಂಗಾಂಗ ದಾನಿಗಳಿಂದ ಅಂಗಗಳನ್ನು ಸುರಕ್ಷಿತವಾಗಿ ಪಡೆಯುವಲ್ಲಿ ಕರ್ನಾಟಕಕ್ಕೆ ಮಾದರಿಯಾಗಿದೆ ಎಂದು ನುಡಿದರು.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಕಿಡ್ನಿ, ಲಿವರ್, ರೆಟಿನಾ ಕಸಿ ಸೌಲಭ್ಯದ ಜತೆ ಚರ್ಮ ಬ್ಯಾಂಕ್ ಸಹ ಇದೆ. ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅಂಗಾಂಗ ದಾನದ ಮಹತ್ವ ತಿಳಿಸಿ, ಅಂಗಾಂಗಳನ್ನು ಪಡೆದು ಅಗತ್ಯವಿದ್ದವರಿಗೆ ಪೂರೈಸುವ ಮಹತ್ವದ ಕಾಯಕಕ್ಕೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಕೇಂದ್ರದಲ್ಲಿ ಇದುವರೆಗೆ ಹದಿನೆಂಟು ಅಂಗಾಂಗ ಪಡೆದು ಶಸ್ತ್ರ ಚಿಕಿತ್ಸೆಯಾಗಿ ೧೨೫ ರಿಂದ ೧೫೦ ಪ್ರಾಣಾಪಾಯದ ಅಂಚಿನಲ್ಲಿದ್ದ ರೋಗಿಗಳಿಗೆ ಸಜೀವ ಅಂಗಗಳನ್ನು ಕಸಿ ಮಾಡಿ ಪುನರ್ ಜನ್ಮ ನೀಡಿದಂತಾಗಿದೆ.
ಒಬ್ಬ ಅಂಗಾಂಗ ದಾನಿಯಿಂದ ಅತ್ಯಂತ ಅಮೂಲ್ಯವಾದ ಕಿಡ್ನಿ, ಲಿವರ್, ಕಣ್ಣು, ಹೃದಯ ಕವಟ, ಶ್ವಾಸಕೋಶ, ಚರ್ಮಗಳನ್ನು ಪಡೆದು ಎಂಟು ಮಂದಿಯ ಜೀವ ಉಳಿಸಬಹುದು ಎಂದು ದೀಪಕ್ ಹೇಳಿದರು.

ಯಾವ ಅಂಗಗಳನ್ನು ದಾನ ಮಾಡಬಹುದು?
ಮೂತ್ರಪಿಂಡ, ಶ್ವಾಸಕೋಶಗಳು, ಹೃದಯ, ಕಣ್ಣು, ಯಕೃತ್ತು, ಮೇದೋಜೀರಕ ಗ್ರಂಥಿ, ಕಾರ್ನಿಯಾ, ಸಣ್ಣ ಕರುಳು, ಚರ್ಮದ ಅಂಗಾಂಶಗಳು, ಮೂಳೆ ಅಂಗಾಂಶಗಳು, ಹೃದಯ ಕವಾಟಗಳು ಮತ್ತು ನರಗಳು.

ಅಂಗಾಂಗ ದಾನ ಉದ್ದೇಶ..!

  • ಅಂಗಾಂಗ ದಾನದ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು.
  • ಅಂಗಾಂಗ ದಾನದ ಸಂದೇಶಗಳನ್ನು ದೇಶದಾದ್ಯಂತ ಹರಡುವುದು.
  • ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಜನರಲ್ಲಿರುವ ಹಿಂಜರಿಕೆಗಳನ್ನು ಹೋಗಲಾಡಿಸುವುದು.
  • ಅಂಗಾಂಗಗಳ ದಾನಿಗಳಿಗೆ ಕೃತಜ್ಞತೆಯಿಂದ ಧನ್ಯವಾದ ಹೇಳುವುದು.
  • ಅಂಗಾಂಗ ದಾನದ ಕಡೆಗೆ ಹೆಚ್ಚು ಜನರನ್ನು ಪ್ರೇರೇಪಿಸುವುದು ಮತ್ತು ಪ್ರೋತ್ಸಾಹಿಸಲು.

ಮೊದಲು ಅಂಗದಾನ ಮಾಡಿದ್ದು ಯಾರು?
ಆಧುನಿಕ ವೈದ್ಯಕೀಯವೂ ಗಮನಾರ್ಹವಾಗಿ ವಿಕಸನಗೊಂಡಿದ್ದು, ಅಂಗಾಂಗಳನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಕಸಿ ಮಾಡಲು ಸಾಧ್ಯವಾಗಿದೆ. ಜೊತೆಗೆ ಆರೋಗ್ಯಕರ ಜೀವನವನ್ನು ನಡೆಸಲು ಅನುವು ಮಾಡಿದೆ.
೧೯೫೪ ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಯಶಸ್ವಿ ಜೀವಂತ ದಾನಿ ಅಂಗಾಂಗ ಕಸಿ ಮಾಡಲಾಯಿತು. ೧೯೯೦ ರಲ್ಲಿ ಅವಳಿ ಸಹೋದರರಾದ ರೊನಾಲ್ಡ್ ಮತ್ತು ರಿಚರ್ಡ್ ಹೆರಿಕ್ ನಡುವೆ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಿದಕ್ಕೆ ವೈದ್ಯ ಜೋಸೆಫ್ ಮುರ್ರೆ ಅವರಿಗೆ ೧೯೯೦ ರಲ್ಲಿ ಶರೀರಶಾಸ್ತ್ರ ಮತ್ತು ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ಪ್ರತಿ ಒಂದು ಮಿಲಿಯನ್ ಜನಸಂಖ್ಯೆಯಲ್ಲಿ ಅಂಗಾಂಗ ದಾನದ ಪ್ರಮಾಣ ಕೇವಲ ಶೇ.೦.೨೬ರಷ್ಟಿದೆ. ವರ್ಷದಿಂದ ವರ್ಷಕ್ಕೆ ಅಂಗಾಂಗ ದಾನ ಬಯಸುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅರ್ಧ ಮಿಲಿಯನ್‌ನಷ್ಟು ಭಾರತೀಯರು ಅಂಗಾಂಗ ದಾನದ ಅಗತ್ಯವನ್ನು ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ಇದರಿಂದಾಗಿ ನಾವು ಅಂಗಾಂಗ ದಾನದ ವಿಚಾರದಲ್ಲಿ ಸಾಕಷ್ಟು ಜನಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ಮಾನವನ ಅಂಗಗಳು ಅತ್ಯಂತ ಅಮೂಲ್ಯವಾದದ್ದು ಮತ್ತು ಯಾರಾದರೂ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರೆ ಅವರು ನಿಜವಾಗಿಯೂ ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ವರ್ಗಾಯಿಸಿ ತಮ್ಮ ಜೀವನವನ್ನೇ ವಿಸ್ತರಿಸಿಕೊಂಡಂತೆ.
-ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್.ಎಸ್

ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್. ಎಸ್, ಸೇರಿದಂತೆ ಹಲವಾರು ವೈದ್ಯರನ್ನು ಸಚಿವ ದಿನೇಶ್ ಗುಂಡೂರಾವ್‌ರವರು ಸನ್ಮಾನಿಸಿದರು. ಶಾಸಕ ರಿಜ್ವಾನ್ ಅರ್ಷದ್, ಮತ್ತಿತರರು ಇದ್ದಾರೆ.