ಅಂಗವಿಕಲ ಅಬ್ದುಲ್ ರಹೆಮಾನ್ ಮೆಕ್ಯಾನಿಕ್‍ಗೆ ರಾಹುಲ್ ಗಾಂಧಿ ನೀಡಿದ ಕಿಟ್ ವಿತರಣೆ

ಕಲಬುರಗಿ,ನ.13-ಸಂಸದರು ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಕೈಗೊಂಡಿರುವ ಭಾರತ ಜೋಡೊ ಯಾತ್ರೆಯು ಕಳೆದ ಅಕ್ಟೋಬರ್ ತಿಂಗಳ 21 ಹಾಗೂ 22 ರಂದು ರಾಯಚೂರು ಗ್ರಾಮೀಣ ಪ್ರದೇಶಕ್ಕೆ ಆಗಮಿಸಿತ್ತು. ಅಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ನಾಯಕರಾದ ಸಂತೋಷ ಬಿಲಗುಂದಿಯವರ ನೇತೃತ್ವದಲ್ಲಿ ರಾಯಚೂರಿಗೆ ತೆರಳಿದ್ದ ತಂಡದಲ್ಲಿ ಎರಡು ಕೈ ಇಲ್ಲದ ಅಂಗವಿಕಲ ಮೆಕ್ಯಾನಿಕ್ ಅಬ್ದುಲ್ ರಹೆಮಾನ್ ಅವರನ್ನು ಜೊತೆಗೆ ಕರೆದೊಯ್ದಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರು ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ ಬಿಲಗುಂದಿಯವರು ಈ ಯುವಕನನ್ನು ರಾಹುಲ್ ಗಾಂಧಿಯವರಿಗೆ ಭೇಟಿ ಮಾಡಿಸಿ ಪರಿಚಯ ಮಾಡಿಕೊಟ್ಟಿದ್ದರು. ಅಬ್ದುಲ್ ರಹೆಮಾನ್ ಅವರು ಎರಡು ಕೈ ಇಲ್ಲದೇ ಇದ್ದರೂ ದ್ವಿಚಕ್ರ ವಾಹನ ರಿಪೇರಿ ಮಾಡುವುದನ್ನು ಕಂಡು ರಾಹುಲ್ ಗಾಂಧಿ ಅವರು ಮೂಕ ವಿಸ್ಮಿತರಾಗಿದ್ದರು. ಎಲ್ಲರ ಸಮ್ಮುಖದಲ್ಲಿಯೆ ಈ ಹುಡುಗನ ಭವಿಷ್ಯ ಉಜ್ವಲ ಮಾಡಲು ಪಣತೊಟ್ಟಿದ್ದರು. ಅದೇ ರೀತಿ ಮೊದಲ ಹೆಜ್ಜೆ ಎಂಬಂತೆ ರಾಹುಲ್ ಗಾಂಧಿ ಅವರು ನೀಡಿದ ಮೆಕ್ಯಾನಿಕ್ ಕಿಟ್‍ನ್ನು ಶಾಸಕ ಪ್ರಿಯಾಂಕ್ ಖರ್ಗೆ ಅವರು ಅಬ್ದುಲ್ ರಹೆಮಾನ್ ಅವರಿಗೆ ವಿತರಣೆ ಮಾಡಿ ಮುಂದಿನ ದಿನಗಳಲ್ಲಿ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಂತೋಷ ಬಿಲಗುಂದಿ, ಅಬ್ದುಲ್ ರಹೆಮಾನ್ ಅವರ ತಂದೆ ಮಹ್ಮದ ಅರ್ಷದ್, ಕಾಂಗ್ರೆಸ್ ನಾಯಕರಾದ ಶಿವಾನಂದ ಹೊನಗುಂಟಿ, ಅಜೀಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕೊಟ್ಟ ಮಾತಿನಂತೆ ನಡೆದುಕೊಂಡ ರಾಹುಲ್ ಗಾಂಧಿಯವರಿಗೆ ಕಲ್ಯಾಣ ಕರ್ನಾಟಕದ ಸಮಸ್ತ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಂತೋಷ ಬಿಲಗುಂದಿಯವರು ತಿಳಿಸಿದರು.