ಅಂಗವಿಕಲರನ್ನು ಗುರುತಿಸಲು ಅಂಗವಿಕಲಕರನ್ನೇ ನೇಮಕ

ಮೈಸೂರು:ಜ:07: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗವಿಕಲರ ಯೋಗಕ್ಷೇಮಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಸಿದ್ದವಿದೆ ಎಂದು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಎಸ್.ಎಂ. ಶಶಿಕುಮಾರ್ ತಿಳಿಸಿದರು.
ಅವರು ಇಂದು ಬೆಳಿಗ್ಗೆ ತಿಲಕನಗರದಲ್ಲಿರುವ ಜಿಲ್ಲಾ ಅಂಗವಿಕಲರ ಪುಬರ್ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ಕೇಂದ್ರದ 9ನೇ ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುಬ 9 ವಲಯಗಳಲ್ಲಿರುವ ಅಂಗವಿಕಲರನ್ನು ಗುರುತಿಸಲು 9 ಮಂದಿಯನ್ನು ನಿಯೋಜಿಸಲಾಗಿದೆ. ಈ 9 ಮಂದಿಯೂ ಅಂಗವಿಕಲರಾಗಿರುವುದು ಒಂದು ವಿಶೇಷ ಸಂಗತಿ ಎಂದರು. ಅಂಗವಿಕಲರ ಸಮಸ್ಯೆಗಳನ್ನು ಅಂಗವಿಕಲರೇ ಬಲ್ಲವರಾಗಿರುವುದರಿಂದ ಅವರನ್ನು ಗುರುತಿಸಲು ಅಂತಹವನ್ನೇ ನೇಮಿಸಿರುವುದರಿಂದ ಇದರಲ್ಲಿ ಯಾವುದೇ ತಪ್ಪು ಮಾಹಿತಿಗಳು ಇರುವುದಿಲ್ಲ ಎಂದು ಶಶಿಕುಮಾರ್ ನುಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗವಿಲಕರ ಪುನಶ್ವೇತನಕ್ಕಾಗಿ ಎಸ್.ಎಫ್.ಸಿ ಮೂಲಕ ಅನುಧಾನ ಬಿಡುಗಡೆ ಮಾಡಿದೆ. ಇದರೊಂದಿಗೆ ನಗರ ಪಾಲಿಕೆ ಸಂಗ್ರಹಿಸುವ ತೆರಿಗೆಯಲ್ಲಿ ಶೇ. 5ರಷ್ಟು ಮೊತ್ತವನ್ನು ಅಂಗವಿಕಲರ ಪುನಶ್ಚೇತನಕ್ಕಾಗಿ ಕಾಯ್ದಿರಿಸಲಾಗಿದೆ. ಈ ಸೌಲಭ್ಯವನ್ನು ಪಡೆಯಲು ಬಯಸುವವರು ನಿಯೋಜಕರು ತಮ್ಮಲ್ಲಿಗೆ ಬಂದಾಗ ತಮ್ಮ ಸಂಪೂರ್ಣ ಮಾಹಿತಿಯನ್ನು ನೀಡಿದ್ದಲ್ಲಿ ಶೀಘ್ರವಾಗಿ ವರದಿಯನ್ನು ಸಿದ್ದಪಡಿಸಿ ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಸರ್ಕಾರದಿಂದ ಅನುಧಾನ ಬಂದ ಕೂಡಲೆ ಅದನ್ನು ಅರ್ಹರಿಗೆ ವಿತರಿಸಲಾಗುವುದೆಂದರು. ಇದುವರೆಗಿನ ಮಾಹಿತಿಯ ಪ್ರಕಾರ 1,200 ಮಂದಿಯನ್ನು ಗುರುತಿಸಲಾಗಿದ್ದು ಇವರೆಲ್ಲರಿಗೂ ಶೀಘ್ರದಲ್ಲಿಯೇ ಅವರಿಗೆ ಅವಶ್ಯವಿರುವ ಸಾಮಗ್ರಿಗಳನ್ನು ಪಾಲಿಕೆಯ ವತಿಯಿಂದ ವಿತರಿಸಲಾಗುವುದೆಮದು ತಿಳಿಸಿದ ಶಶಿಕುಮಾರ್ ಅಂಗವಿಕಲರು ಯಾವ ಕಾರಣದಿಂದಲೂ ಧೈರ್ಯಗುಂದದೆ ಇರುವಂತೆ ಮನವಿ ಮಾಡಿದರಲ್ಲದೆ ಅಂಗವಿಕಲರ ಯೋಗಕ್ಷೇಮಕ್ಕಾಗಿ ಮಹಾ ನಗರ ಪಾಲಿಕೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.
ಅಂಗವಿಕಲರು ನಗರದಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥಯಿಂದ ಅಧಿಕೃತ ಪ್ರಮಾಣ ಪತ್ರ ತಂದು ಅದನ್ನು ಪಾಲಿಕೆಗೆ ತಲುಪಿಸಿದ್ದಲ್ಲಿ ಅವರಿಗೆ ಅವಶ್ಯವಿರುವ ಪದಾರ್ಥಗಳನ್ನು ನೀಡಲಾಗುವುದು. ಈ ದೆಸೆಯಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದಂತೆ ಮನವಿ ಮಾಡಿದರು. ಇದಲ್ಲದೆ ಅಂಗವಿಕಲ ಮಕ್ಕಳ ಪೋಷಣೆ ಹಾಗೂ ಪಾಲನೆಗಾಗಿ ನಗರ ಪಾಲಿಕೆ ವತಿಯಿಂದ ನಗರದ 3ಕಡೆ ಹಗಲು ನಿರ್ವಹಣಾ ಕೇಂದ್ರಗಳನ್ನು ತೆರೆಯಲಾಗಿದೆ. ಇದನ್ನು ಹೆಚ್ಚಿನ ನಿರ್ವಹಣಾ ಕೇಂದ್ರಗಳ ಅವಶ್ಯವಿರುವುದರಿಂದ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗತಳೊಂದಿಗೆ ವಿಚಾರ ವಿನಿಮಯ ನಡೆಸಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಅಂಗವಿಕಲರಿಗೆ ಪ್ರತ್ಯೇಕ ಉದ್ಯಾನವನ, ಟ್ರೈಸೈಕಲ್ ವಿತರಣೆ, ಮನೆಕಟ್ಟಲು ಹಾಗೂ ವ್ಯಾಪಾರ ವಹಿವಾಟು ಮಾಡಲು ಸಾಲ ಸೌಲಭ್ಯ, ಹೆಚ್ಚಿನ ವ್ಯಾಸಂಗ ಮಾಡುವವರಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರಿಗೆ ಪ್ರೋತ್ಸಾಹ ನೀಡಲಾಗುವುದು. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರ ಪೋಷಕರು ನಿಯೋಜಕರು ತಮ್ಮಲ್ಲಿಗೆ ಬಂದಾಗ ಪೂರ್ಣ ವಿವರಗಳನ್ನ ನೀಡಿ ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಶಶಿಕುಮಾರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲ ಮೈಸೂರು ಜಿಲ್ಲಾ ವಿಕಲಚೇತನೆ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎನ್. ಶ್ರೀಧರದೀಕ್ಷಿತ್, ಸದಸ್ಯ ಹಾಗೂ ನಗರ ಪಾಲಿಕೆಯ ಸದಸ್ಯ ಆರ್. ರಂಗಸ್ವಾಮಿ, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಮೈಸೂರು ಶಾಖೆಯ ಆಟಳಿತ ಮಂಡಳಿ ಸದಸ್ಯೆ ಬಿ.ಎಸ್. ಸುಧಾ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿ ಎಂ. ಮಹದೇವಪ್ಪ, ನೋಡಲ್ ಅಧಿಕಾರಿಗಳಾದ ಅರ್ಜುನ್.ವೈ.ಆರ್, ಮುರಳೀಧರ್ ಸಿಬ್ಬಂದಿ ವರ್ಗದವರು ಮತ್ತು ಅಂಗವಿಕಲ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಮೈಸೂರು ಶಾಖೆಯ ಸಭಾಪತಿ ಡಾ|| ಕೆ.ಬಿ. ಗುರುಮೂರ್ತಿ ವಹಿಸಿದ್ದರು.