ಬ್ಯಾಡಗಿ,ಜೂ.30: ಅಂಗವಿಕಲತೆ ಒಂದು ಶಾಪ ಎಂದು ಭಾವಿಸಬೇಡಿ. ಅಂಗವಿಕಲತೆಯನ್ನು ಎದುರಿಸುತ್ತಿರುವ ಮಕ್ಕಳು ತಮ್ಮ ಅಂಗವೈಕಲ್ಯದ ಬಗ್ಗೆ ಕೊರಗದೇ ಎಲ್ಲರ ಜೊತೆ ಬೆರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಅವರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸವಾಗಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ತಾಲೂಕಿನ ವಿಕಲಚೇತನ ಮಕ್ಕಳಿಗೆ ವ್ಹೀಲ್ ಚೇರ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾ ಮಕ್ಕಳಿಗೆ ವ್ಹೀಲ್ ಚೇರ್ ವಿತರಿಸಿ ಮಾತನಾಡಿದ ಅವರು, ವಿಕಲಚೇತರಿಗೆ ಬರೀ ಅನುಕಂಪ ತೋರಿಸಿದರೆ ಸಾಲದು, ಅವರು ತಮ್ಮ ಬದುಕಿನಲ್ಲಿ ನೆಲೆ ನಿಲ್ಲುವುದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕಾಗಿದೆ. ರೋಟರಿ ಕ್ಲಬ್ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನ ಮಾಡುತ್ತಾ ಬಂದಿದೆ. ಬ್ಯಾಡಗಿ ತಾಲೂಕಿನ 20 ವಿಕಲಚೇತನ ವಿದ್ಯಾರ್ಥಿಗಳಿಗೆ ವ್ಹೀಲ್ ಚೇರ್‍ಗಳನ್ನು ಕೊಡುಗೆಯಾಗಿ ನೀಡಿದೆ. ರೋಟರಿ ಕ್ಲಬ್ ವತಿಯಿಂದ ಆರೋಗ್ಯ ಶಿಬಿರಗಳು, ಪರಿಸರ, ಕೋವಿಡ್ ಸಂದರ್ಭದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದ್ದು ರೋಟರಿ ಕ್ಲಬ್ ಸೇವಾ ನಿರತ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರದ ಅನುದಾನದ ಕೊರತೆಯಿಂದ ವಿಕಲಚೇತನ ಶಾಲಾ ಮಕ್ಕಳಿಗೆ ವ್ಹೀಲ್ ಚೇರ್ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದ್ದರು. ಈ ಕಾರಣದಿಂದ ತಮ್ಮ ಕ್ಲಬ್ ಸದಸ್ಯರ ಸಹಕಾರದೊಂದಿಗೆ ಸುಮಾರು 1.80ಲಕ್ಷ ರೂಗಳ ವೆಚ್ಚದಲ್ಲಿ 20ವ್ಹೀಲ್ ಚೇರ್ ಖರೀದಿಸಿ ಶಾಸಕರ ಮೂಲಕ ವಿಕಲಚೇತನ ಮಕ್ಕಳಿಗೆ ವಿತರಿಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಲತೇಶ ಅರಳಿಮಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಟಿಇಓ ಮಲ್ಲಿಕಾರ್ಜುನ, ಮುಖಂಡರಾದ ದಾನಪ್ಪ ಚೂರಿ, ಚನಬಸಪ್ಪ ಹುಲ್ಲತ್ತಿ, ಪಾಂಡುರಂಗ ಸುತಾರ, ಸುಭಾಷ್, ಗಾಲಿ ಕುರ್ಚಿ ದಾನಿಗಳಾದ ಬಸವರಾಜ ಸುಂಕಾಪುರ, ಜೆ.ಎಚ್.ಪಾಟೀಲ, ಚೇತನ್ ಕುಡುತರಕರ, ಮಹಾಂತೇಶ ಮೇಲ್ಮುರಿ, ಸಿದ್ದಲಿಂಗಯ್ಯ ಬೂದಿಹಾಳಮಠ, ವೀರೇಶ ಬಾಗೋಜಿ, ಸತೀಶ ಅಗಡಿ, ಪರಶುರಾಮ ಮೇಲಗಿರಿ, ಮಾಲತೇಶ ಉಪ್ಪಾರ, ವೀರಪ್ಪ ಧನ್ನೂರ, ಲಿಂಗಯ್ಯ ಹಿರೇಮಠ, ವಿಶ್ವನಾಥ ಅಂಕಲಕೊಟಿ, ಪವಾಡೆಪ್ಪ ಆಚನೂರ, ಕಿರಣ ವೆರ್ಣೇಕರ, ಮಹಾಂತೇಶ ಸುಂಕದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.