ಕರಜಗಿ : ಅ.12:ಸರಕಾರಿ ನೌಕರರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಹುದ್ದೆಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಬೇಕು ಎಂಬ ನಿಯಮವಿದೆ.ಆದರೆ 2020 ಡಿಸೆಂಬರ್ ನಲ್ಲಿ ನಡೆದ ಸಾರ್ವತ್ರಿಕ ಗ್ರಾಪಂ ಚುನಾವಣೆಯಲ್ಲಿ ಮಾಶಾಳ ಗ್ರಾಮದ ವಾರ್ಡ್ ನಂ: 8ರಿಂದ ಸ್ಪರ್ಧಿಸಿ ಗೆಲುವು ಕಂಡಿರುವ ಯಲ್ಲಮ್ಮಾ ವಗ್ಗಿ ಇಲಾಖೆಗೆ ಮಾಹಿತಿ ಕೊಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಅಂಗನವಾಡಿ ಸಹಾಯಕಿ ಹುದ್ದೆಯಿಂದ ವಜಾಗೊಳಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ತಾಲೂಕಿನ ಮಾಶಾಳ ಗ್ರಾಮದ ಎಸ್.ಸಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಡವಾಗಿ ಮಾಹಿತಿ ಬಂದಿದ್ದರಿಂದ ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದಾಗ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.ಸರಕಾರದ ಆದೇಶದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಚುನಾವಣೆ ಸ್ಪರ್ಧಿಸಿ ಜನ ಪ್ರತಿನಿಧಿಗಳಾಗಿ ಆಯ್ಕೆಯಾದ ಒಂದು ತಿಂಗಳೊಳಗೆ ಯಾವುದಾದರೊಂದು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅದರಂತೆ ಇಲಾಖೆಗೆ ತಿಳಿಸಬೇಕು.ನಂತರ ಒಂದು ಸೂಚನೆ ನೀಡಿ 15 ದಿನಗಳೊಳಗಾಗಿ ಅವರಿಂದ ಯಾವುದೇ ಉತ್ತರ ಬಾರದಿದ್ದರೆ ಇಲಾಖೆಯೇ ಅವರನ್ನು ಹುದ್ದೆಯಿಂದ ವಜಾಗೊಳಿಸುವುದು ಎಂದು ಆದೇಶ ವಿರುತ್ತದೆ.ಅಫಜಲಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಲವು ಬಾರಿ ತಿಳುವಳಿಕೆ ನೋಟಿಸ್ ಜಾರಿಮಾಡಿದ್ದು,ಅವರಿಂದ ಯಾವುದೇ ಉತ್ತರ ಬಾರದಿದ್ದಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಶಾಳ ಅಂಗನವಾಡಿ ಸಹಾಯಕಿ ಯಲ್ಲಮ್ಮಾ ವಗ್ಗಿ ಅವರನ್ನು ಸಹಾಯಕಿ ಹುದ್ದೆಯ ಕರ್ತವ್ಯವನ್ನು ನಿಯಮಬಾಹಿರವಾಗಿ ನಿರ್ವಹಿಸುತ್ತಿರುವುದಕ್ಕೆ ಸಹಾಯಕಿ ಹುದ್ದೆಯ ಗೌರವ ಸೇವೆ ಮಾನ್ಯತೆಯನ್ನು ಹಿಂಪಡೆಯಲಾಗಿದೆ.ಆದರೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.