ಅಂಗನವಾಡಿ ಸಹಾಯಕರಿಗೆ ಪದೋನ್ನತಿಗೆ ಆಗ್ರಹಿಸಿ ಧರಣಿ

ಕಲಬುರಗಿ,ಮಾ.14: ಜಿಲ್ಲೆಯಲ್ಲಿ ನಗರ ಮತ್ತು ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಸಹಾಯಕರಿಗೆ ಪದೋನ್ನತಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರನ್ನಾಗಿಸುವಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯ ಮತ್ತು ಆಗುತ್ತಿರುವ ಅನ್ಯಾಯ ವಿರೋಧಿಸಿ ನಗರದ ಸಿಡಿಪಿಓ ಯೋಜನಾಧಿಕಾರಿ ಕಚೇರಿ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಪ್ರತಿಭಟನಾ ಧರಣಿ ಮಾಡಿದರು.
ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಘಂಟಿ, ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್ ಅವರು ಮಾತನಾಡಿ, ಮೆಟ್ರಿಕ್ ಮುಗಿಸಿರುವ ಅಂಗನವಾಡಿ ಸಹಾಯಕಿಯರನ್ನು ವರ್ಗಾವಣೆ ಅಥವಾ ನಿವೃತ್ತಿಯಿಂದ ಖಾಲಿ ಆಗುವ ಸ್ಥಾನಕ್ಕೆ ಪದೋನ್ನಪತಿ ಮಾಡಿ ಅಂಗನವಾಡಿ ಕಾರ್ಯಕರ್ತೆ ಎಂದು ನೇಮಕ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ ಇದು ಪಥ್ಯವಾಗುತ್ತಿಲ್ಲ. ಇದರಿಂದಾಗಿ 24 ಮೆಟ್ರಿಕ್ ಮುಗಿಸಿರುವ ಅಂಗನವಾಡಿ ಸಹಾಯಕಿಯರಿದ್ದರೂ, ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ ನಿಟ್ಟಿನಲ್ಲಿ 24 ಸಹಾಯಕಿಯರಿಗೆ ಅನ್ಯಾಯವಾಗಿದೆ. 2-3 ವರ್ಷಗಳಿಂದ ಅರ್ಜಿ ಸಲ್ಲಿಸಲಾಗಿದೆ. ಕೊರೊನಾದಿಂದ ಸುಮ್ಮನಿದ್ದೆವು. ಇನ್ನೂ ಸುಮ್ಮನೇ ಕೂಡುವುದರಲ್ಲಿ ಅರ್ಥವಿಲ್ಲ ಎಂದು ನಗರ ಸಿಡಿಪಿಒ ಕಚೇರಿ ಎದುರು ಅನಿರ್ದಿಷ್ಟಾವಧಿವರೆಗೆ ಅಹೋರಾತ್ರಿ ಧರಣಿ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಧರಣಿಯಲ್ಲಿ ರತ್ನಾ, ರೆಹೆಫತ್ ಬೇಗಂ, ಸಾಬಮ್ಮ, ಶರಣಮ್ಮ, ವನಿತಾ, ರೇಣುಕಾ, ನಾಗಮ್ಮ ಮುಂತಾದವರು ಪಾಲ್ಗೊಂಡಿದ್ದರು.