ಅಂಗನವಾಡಿ, ಶಾಲೆಗಳಿಗೆ ತಕ್ಷಣ ಜಾಗ ತ್ವರಿತ ಕ್ರಮಕ್ಕೆ ಅಧ್ಯಕ್ಷರ ಸೂಚನೆ

ಪುತ್ತೂರು, ನ.೬- ತಾಲೂಕಿನಲ್ಲಿರುವ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ತ್ವರಿತವಾಗಿ ಜಾಗ ಮಂಜೂರುಗೊಳಿಸಿ, ಗಡಿಗುರುತು ಮಾಡಿ ಪಹಣಿ ಪತ್ರಿಕೆ ಸಿದ್ದಪಡಿಸುವಂತೆ ತಾಪಂ ಅಧ್ಯಕ್ಷ
ಕೆ. ರಾಧಾಕೃಷ್ಣ ಬೋರ್ಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಮಾಸಿಕ ಕೆಡಿಪಿ ಸಭೆ ಗುರುವಾರ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ಅ ವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಾಲನಾ ವರದಿ ಮಂಡಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ತಾಲೂಕಿನಲ್ಲಿ ೧೧ ಅಂಗನವಾಡಿ ಕೇಂದ್ರಗಳಿಗೆ ಜಾಗ ಮಂಜೂರು ಬಗ್ಗೆ ಗಡಿಗುರುತು ನಡೆಸಲಾಗಿಲ್ಲ ಎಂದು ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಅವರೂ ತಾಲೂಕಿನಲ್ಲಿ ೭೫ ಶಾಲೆಗಳಿಗೆ ಜಾಗ ಮಂಜೂರುಗೊಂಡಿರುವುದಿಲ್ಲ ಎಂಬ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ಗಡಿಗುರುತು ನಡೆಸಿ ಪಹಣಿ ಪತ್ರಿಕೆ ಸಿದ್ದಪಡಿಸಬೇಕು. ಹೊಸ ವರ್ಷದ ಒಳಗಾಗಿ ಎಲ್ಲಾ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಪಹಣಿ ಪತ್ರಿಕೆ ಸಿದ್ದಗೊಳ್ಳಬೇಕು ಎಂದು ಕಂದಾಯ ಇಲಾಖೆ ಮತ್ತು ಭೂ ದಾಖಲೆಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್ಲಪದವು ಆರೋಗ್ಯ ಇಲಾಖೆಯ ವಸತಿ ಸಮುಚ್ಚಯ ಬೀಳುವ ಹಂತದಲ್ಲಿದ್ದು, ಈ ಕಟ್ಟಡ ತೆರವುಗೊಳಿಸುವ ಬಗ್ಗೆ ಗುತ್ತಿಗೆದಾರರು ಮುಂದೆ ಬಾರದಿರುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಟೆಂಡರ್ ದರ ಕಡಿಮೆಗೊಳಿಸಿ ಮತ್ತೆ ಏಲಂ ನಡೆಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದಿನ ಸಭೆಯಲ್ಲಿ ಅಧ್ಯಕ್ಷರು ತಿಳಿಸಿರುವಂತೆ ಪಾಣಾಜೆ ಆರೋಗ್ಯ ಕೇಂದ್ರಕ್ಕೆ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿ ಯೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಸಭೆಗೆ ತಿಳಿಸಿದರು.
ರಸ್ತೆ ಬದಿಗಳಲ್ಲಿ ಕಿಟಿಕಿ, ಬಾಗಿಲು ಇನ್ನಿತರ ಗೃಹ ನಿರ್ಮಾಣದ ವಸ್ತುಗಳನ್ನಿಟ್ಟು ಮಾರಾಟ ಮಾಡುತ್ತಿರುವುದರಿಂದ ರಸ್ತೆಗಳಲ್ಲಿ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ತಿಳಿಸಿದ ಅಧ್ಯಕ್ಷರು ಯಾರಿಗೂ ಮಾರಾಟಕ್ಕೆ ಅವಕಾಶ ನೀಡದೆ ತೆರವುಗೊಳಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯ ಇಲಾಖೆಯ ಪಹಣಿ ಪತ್ರಿಕೆಯಲ್ಲಿ ದಾಖಲಿಸಲಾಗಿಲ್ಲದ ಕೊಳ್ತಿಗೆ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು ೧೮ ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟೀಸು ನೀಡಿ ತೆರವುಗೊಳಿಸುವಂತೆ ತಿಳಿಸಿದೆ. ಸುಮಾರು ೧೫ ವರ್ಷಗಳಿಂದ ಇಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿರುವ ಇಲ್ಲಿನ ಬಡ ಕುಟುಂಬಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಅಧ್ಯಕ್ಷರು ತಿಳಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅರಣ್ಯ ಅಧಿಕಾರಿಯವರು ಈ ಪ್ರದೇಶ ಮೀಸಲು ಅರಣ್ಯ ವ್ಯಾಪ್ತಿಗೆ ಬರುತ್ತಿರುವುದರಿಂದ ವಾಸಕ್ಕೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು. ಅರಣ್ಯ ಇಲಾಖೆಗೆ ಪಹಣಿ ಪತ್ರವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಅರಣ್ಯದ ಜಾಗ ಅಲ್ಲವೆಂದು ಹೇಳಲು ಆಗುವುದಿಲ್ಲ. ಪಹಣಿ ಪತ್ರಿಕೆ ನೀಡುವಂತೆ ಕಂದಾಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಈ ತನಕ ಅವರು ಮಾಡಿಕೊಟ್ಟಿಲ್ಲ ಎಂದು ದೂರಿದರು. ನೀವು ಅರ್ಜಿ ನೀಡಿದಲ್ಲಿ ನಾವು ಪಹಣಿ ಪತ್ರಿಕೆ ನೀಡುತ್ತೇವೆ ಎಂದು ತಹಸೀಲ್ದಾರ್ ರಮೇಶ್ ಬಾಬು ಅವರು ತಿಳಿಸಿದರು. ನಿಮಗೆ ಪಹಣಿ ಪತ್ರಿಕೆ ಸಿಗಬಹುದು ಆದರೆ ಅಲ್ಲಿನ ಬಡವರ ಗತಿಯೇನು ಎಂದು ಪ್ರಶ್ನಿಸಿದ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಅವರಿಗೆ ಅದೇ ಪ್ರದೇಶದಲ್ಲಿ ತಲಾ ೫ ಸೆಂಟ್ಸ್ ಸರ್ಕಾರಿ ಜಮೀನನ್ನು ತಕ್ಷಣವೇ ಆ ಕುಟುಂಬಳಿಗೆ ಮಂಜೂರುಗೊಳಿಸುವಂತೆ ತಹಸೀಲ್ದಾರ್ ಅವರಿಗೆ ತಿಳಿಸಿದರು.
ತಹಸೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.