ಅಂಗನವಾಡಿ ಮಕ್ಕಳ ಆಹಾರ ಧಾನ್ಯಗಳು ಕಳ್ಳಸಂತೆಯಲ್ಲಿ ಮಾರಾಟ

ತರಕಸಪೇಠ(ವಾಡಿ):ಡಿ.4: ಗ್ರಾಮದ ಅಂಗನವಾಡಿ ಕೇಂದ್ರ 2 ಮತ್ತು 3 ಹಾಗೂ ಕೇಂದ್ರ 1ರಲ್ಲಿನ ಅಂಗನವಾಡಿ ಕಾರ್ಯಕರ್ತೆಯಾದ ಭಾಗ್ಯಶ್ರೀ, ಸಹಾಯಕಿಯಾದ ಶಾಂತಮ್ಮ ಇಬ್ಬರು ತಾಯಿ-ಮಗಳು ಸೇರಿ ಅಂಗನವಾಡಿ ಮಕ್ಕಳಿಗೆ ಸರಕಾರದಿಂದ ಬರುವಂತಹ ಆಹಾರ ಧಾನ್ಯಗಳನ್ನು ಮಕ್ಕಳಿಗೆ 6 ತಿಂಗಳಿಂದ ಹಂಚಿಕೆ ಮಾಡದೆ ಕಳ್ಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಶಹಾಬಾದ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಬೇಜವಾಬ್ದಾರಿಯಿಂದ ವರ್ತಿಸುವುದು ಅಲ್ಲದೆ. ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ, ಎಲ್ಲಿಯಾದರೂ ಹೋಗಿ ನಮ್ಮ ಮೇಲೆ ದೂರು ಕೊಡಿ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳುತ್ತಾ ಕರ್ತವ್ಯದಲ್ಲಿ ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿ.

ಅಂಗನವಾಡಿ ಕೇಂದ್ರ 2 ಮತ್ತು 3 ಹಾಗೂ ಅಂಗನವಾಡಿ ಕೇಂದ್ರ 1ರ ಕಾರ್ಯಕರ್ತೆ ಹಾಗೂ ಸಹಾಯಕಿಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕು ಸಹಕಾರ್ಯದರ್ಶಿ ಶಂಕರ್ ಭಜಂತ್ರಿ, ಕರವೇ ರೈತ ಘಟಕ ಉಪಾಧ್ಯಕ್ಷ ರಾಯಪ್ಪ ಪೂಜಾರಿ, ನಾಲವಾರ ವಲಯ ಸಂಚಾಲಕ ಮೌನೇಶ್ ಕಂಬಾರ, ತರಕಸಪೇಠ ಗ್ರಾಮ ಘಟಕ ಅಧ್ಯಕ್ಷ ಪಂಪಣ್ಣಗೌಡ, ಮಲ್ಲಿಕಾರ್ಜುನ್ ಮಳಗ, ಸಿದ್ದಣ್ಣ ಚ್ಯಾಳಿ, ಬೆಳಗೇರಾ ಅಧ್ಯಕ್ಷ ದೇವು, ಸೇರಿದಂತೆ ಇತರರಿದ್ದರು.