ಅಂಗನವಾಡಿ ನೌಕರರ ಸಂಘದಿಂದ ಅಖಿಲ ಭಾರತ ಮುಷ್ಕರ


ಹೊನ್ನಾಳಿ.ನ.೧೦; ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನ.೨೬ರಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂಗನವಾಡಿ ನೌಕರರಿಗೆ ೨೧ ಸಾವಿರ ರೂ.ಗಳಷ್ಟು ಕನಿಷ್ಟ ವೇತನ ನೀಡಬೇಕು. ನೌಕರಿಯನ್ನು ಖಾಯಂ ಮಾಡಬೇಕು. ೧೦ ಸಾವಿರ ರೂ.ಗಳಷ್ಟು ನಿವೃತ್ತಿ ವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಿಐಟಿಯು ತಾಲೂಕು ಸಂಚಾಲನಾ ಸಮಿತಿಯ ಸದಸ್ಯ ಪುರುವಂತರ ಪರಮೇಶ್ವರಪ್ಪ ಮಾತನಾಡಿ, ಅಂಗನವಾಡಿ ನೌಕರರಿಗೆ ಹೆಚ್ಚುವರಿ ಕೆಲಸ ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಬಸವರಾಜ್ ಕೋರಿ ಮಾತನಾಡಿ, ೨೦೨೦ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸುವ ಕೆಲಸ ಜರೂರಾಗಿ ಆಗಬೇಕಿದೆ ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು. ಪ್ರಾರಂಭಿಕ ಬಾಲ್ಯಾವಸ್ಥೆಯ ಪಾಲನೆ ಮತ್ತು ಶಿಕ್ಷಣವನ್ನು ಉಚಿತವಾಗಿ ಹಾಗೂ ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಲ್ಲೇ ಕೊಡಲು ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಡಿ. ಲತಾಬಾಯಿ ಮಾತನಾಡಿ, ಕೊರೊನಾ ಸೋಂಕಿನಿಂದ ಮೃತರಾಗಿರುವ ೨೬ ಮಂದಿ ಹಾಗೂ ಕೆಲಸದ ಒತ್ತಡದಿಂದ ಮೃತರಾಗಿರುವ ಅಂಗನವಾಡಿ ನೌಕರರ ಮಕ್ಕಳಿಗೆ ನೇಮಕಾತಿ ನಿಯಮ ಸಡಿಲಿಸಿ, ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕು ಎಂದು ವಿನಂತಿಸಿದರು.
ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಎಂ.ಎಚ್. ಜಯಪ್ಪ ಮಾತನಾಡಿ, ನ.೨೬ರ ಮುಷ್ಕರಕ್ಕೆ ನಮ್ಮ ಸಂಘ ಕೂಡ ಬೆಂಬಲ ನೀಡುತ್ತದೆ. ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಹೇಳಿದರು.
ಅಂಗನವಾಡಿ ನೌಕರರಾದ ವಿ. ರತ್ನಮ್ಮ, ಹತ್ತೂರು ಎಂ.ಎಚ್. ನಾಗರತ್ನ, ಎಂ. ಸುವರ್ಣಮ್ಮ, ಎಸ್.ಎಚ್. ಗೀತಾ, ಬೇಬಿಬಾಯಿ, ಯಶೋದ, ಪಿ. ಗೀತಾ, ರಾಧಮ್ಮ, ಭಾಗ್ಯ, ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ನಾಗರಾಜ್, ಸಮೀವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಭಾಗಗಳ ನೂರಾರು ಅಂಗನವಾಡಿ ನೌಕರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.