ಅಂಗನವಾಡಿ ನೌಕರರ ಪ್ರತಿಭಟನೆ

ಕಲಬುರಗಿ,ಜು.10-ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ ಕೆಲಸಗಾರರನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್ ನೀಡಬೇಕು, 2032ರ ಬಜೆಟ್‍ನಲ್ಲಿ ಹೆಚ್ಚಳವಾದ 1 ಸಾವಿರ ರೂ.ಗೌರವಧನ ಬಿಡುಗಡೆ ಮಾಡಬೇಕು, ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ಜಾರಿಗೊಳಿಸಬೇಕು, ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಮಾಜಿಕ ಭದ್ರತೆಗಳಾದ ಇಎಸ್‍ಐ, ಪಿಫ್, ಪಿಂಚಣಿ, ಎಕ್ಸಗ್ರೇಷಿಯಾ ಇತರ ಸೌಲಭ್ಯ ಒದಗಿಸಬೇಕು, 45 ಮತ್ತು 46ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್‍ಗಳ ಶಿಫಾರಸ್ಸು ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಅಧ್ಯಕ್ಷೆ ಗೌರಮ್ಮ ಪಾಟೀಲ, ಕಾರ್ಯದರ್ಶಿ ರಾಜಮತಿ ಪಾಟೀಲ, ಗೌರವಾಧ್ಯಕ್ಷೆ ಶಾಂತಾ ಎನ್.ಘಂಟೆ, ಮಹಾದೇವಿ ಪೋಲಕಪಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.