ಅಂಗನವಾಡಿ ನೌಕರರ ದೆಹಲಿ ಚಲೋ

ಹುಳಿಯಾರು, ಜು. ೨೭- ಅಂಗನವಾಡಿ ನೌಕರರ ಹಕ್ಕುಗಳಿಗಾಗಿ, ಐಸಿಡಿಎಸ್ ಯೋಜನೆಯ ಅಗತ್ಯ ಅನುದಾನ ಬಿಡುಗಡೆಗೆ ಒತ್ತಾಯಿಸಿ ನವದೆಹಲಿಯ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುವ ಸಲುವಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಂಗನವಾಡಿ ನೌಕರರು ದೆಹಲಿಗೆ ತೆರಳಿದರು.
ಗ್ರಾಚ್ಯುಟಿ (ಉಪಧನ) ಕಾಯ್ದೆ ೧೯೭೨ ಸಾಮೂಹಿಕ ಭದ್ರತಾ ಕಲ್ಯಾಣ ಶಾಸನ ಆಗಿದ್ದರೂ ಗ್ರಾಚ್ಯುಟಿಯನ್ನು ವಿತರಿಸುವಲ್ಲಿ ನಿರ್ಲಕ್ಷ್ಯಿಸಿರುವುದು, ರಾಜ್ಯ ಸರ್ಕಾರದ ನಿಗದಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸದಿರುವುದು, ಐಸಿಡಿಎಸ್ ಯೋಜನೆ ಜಾರಿ ಆದ ೪೮ ವರ್ಷಗಳಿಂದಲೂ ಅಂಗನವಾಡಿ ನೌಕರರನ್ನು ಖಾಯಂ ಮಾಡಿಲ್ಲದಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪೂರ್ಣಮ್ಮ ತಿಳಿಸಿದ್ದಾರೆ.
ಅಲ್ಲದೆ ೨೬ ಸಾವಿರ ರೂ. ಕನಿಷ್ಠ ವೇತನ, ಹಾಗೂ ೧೦ ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ನೂತನ ಶಿಕ್ಷಣ ಕಾಯ್ದೆ ಖಾಸಗೀಕರಣದ ಭಾಗವಾಗಿದೆ. ಸರ್ಕಾರ ಪಬ್ಲಿಕ್ ಶಾಲೆಗಳು ತೆರೆಯುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ಹುನ್ನಾರ ರೂಪಿಸಿದೆ. ಕೇಂದ್ರಗಳನ್ನು ಮುಚ್ಚಲು ಬಿಡುವುದಿಲ್ಲ. ಬದಲಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಮುಂದುವರೆಸಲು ಸರ್ಕಾರ ಆದೇಶ ಮಾಡಬೇಕು ಎಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.

ಅನೇಕ ವರ್ಷಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಡಿಕೆಗಳನ್ನು ಈಡೇರಿಸಿಲ್ಲ. ಹಾಗಾಗಿ ಅನಿವಾರ್ಯವಾಗಿ ದೆಹಲಿ ಚಲೋ ಹಮ್ಮಿಕೊಂಡಿದ್ದು ತಾಲ್ಲೂಕಿನಿಂದ ೫೦ ಕ್ಕೂ ಹೆಚ್ಚು ಅಂಗನವಾಡಿ ನೌಕರರು ಭಾಗವಹಿಸುತ್ತಿರುವುದಾಗಿ ಅವರು ತಿಳಿಸಿದರು.