ಅಂಗನವಾಡಿ ನೌಕರರಿಂದ ಉಪವಾಸ ಸತ್ಯಾಗ್ರಹ

ಬಳ್ಳಾರಿ ಮಾ 15 : ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಬೆಳಿಗ್ಗೆ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಛೇರಿ ಮುಂದೆ ಅಂಗನವಾಡಿ ನೌಕರರು ಉಪವಾಸ ಸತ್ಯಾಗ್ರಹವನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡಾ ಕೊರೋನಾ ಸಂದರ್ಭದಲ್ಲಿ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೇ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸ ಒತ್ತಡದಿಂದ 35 ಜನ, ಕೊರೋನಾ ಕೆಲಸ ಮಾಡುವ 28 ಜನರು ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ಬಲಿಯಾಗಿದ್ದಾರೆ. 173 ಜನರಿಗೆ ಕೊರೋನಾ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಹೈಕೋರ್ಟ್ ಕೊರೋನಾ ಸಂದರ್ಭದಲ್ಲಿ ಮಕ್ಕಳಿಗೆ – ಮಹಿಳೆಯರ ಅಪೌಷ್ಠಿಕೆಯನ್ನು ತಡೆಯಲು ಎಚ್ಚರಿಕೆಯನ್ನು ಕೊಟ್ಟಿತ್ತು. ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆಗಳಿಂದ ಸರ್ಕಾರದ ಘನೆತೆಯನ್ನು ಕಾಪಾಡಿದ್ದು ಇದೇ ಅಂಗನವಾಡಿ ನೌಕರರು. ಹಲವು ಹಂತಗಳ ಹೋರಾಟಗಳ ಒತ್ತಾಯಗಳ ಭಾಗವಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ
ಸೇವಾ ಜೇಷ್ಠತೆಯ ಆಧಾರದಲ್ಲಿ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ 6.99 ಕೋಟಿ, ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ 131.42 ಕೋಟಿ, ನಿವೃತ್ತಿ ಸೌಲಭ್ಯ 47.82 ಕೋಟಿ ಸೇರಿದಂತೆ ಒಟ್ಟು 339.38 ಕೋಟಿ ರೂಪಾಯಿಗಳನ್ನು ಶಿಫಾರಸ್ಸು ಮಾಡಲಾಗಿತ್ತು. ಈ ಮೊತ್ತ ನೀಡಿದ್ದರೆ, 1 ಲಕ್ಷ 30 ಸಾವಿರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈ ಮೂರು ಶಿಫಾರಸ್ಸುಗಳಲ್ಲಿ ಯಾವುದೇ ಒಂದು ಅಂಶವನ್ನು ಪರಿಗಣನೆ ಮಾಡಿಲ್ಲ. 2016 ರಿಂದ 7304 ಜನ ನಿವೃತ್ತಿಯಾಗಿದ್ದಾರೆ. ಅವರಿಗೆ ಇಡಗಂಟನ್ನು ಕೂಡಾ ಸರ್ಕಾರ ಪರಿಗಣನೆ ಮಾಡಿಲ್ಲ. ಮಾರ್ಚ್ 4 ರಂದು ಅಂಗನವಾಡಿ ನೌಕರರು ಬಜೆಟ್ ಅಧಿವೇಶನ ಚಲೋ ನಡೆಸಿದಾಗ ಸಚಿವೆಬ ಶಶಿಕಲಾ ಜೊಲ್ಲೆಯವರು ಸ್ಥಳಕ್ಕೆ ಆಗಮಿಸಿ ಈ ಬಜೆಟ್‍ನಲ್ಲಿ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಆ ಭರವಸೆಯನ್ನು ಹುಸಿ ಮಾಡಲಾಗಿದೆ ಎಂದರು.
ನಾಳೆಯಿಂದ ಹೆಚ್ಚುವರಿ ಕೆಲಸಗಳಾದ ಇ-ಸರ್ವೇ, ಆರ್.ಡಿ.ಪಿ.ಆರ್.ನಿಂದ ಕೊಟ್ಟಿರುವ ಸರ್ವೇ, ಬಿಪಿಎಲ್ ಕಾರ್ಡ್, ಆರ್.ಸಿ.ಹೆಚ್. ಸರ್ವೇ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ, ಸ್ತ್ರೀ ಶಕ್ತಿ, ಚುನಾವಣಾ ಮುಂತಾದ ಕೆಲಸಗಳನ್ನು ಬಹಿಷ್ಕರಿಸಲು ಸಂಘಟನೆ ಕರೆ ಕೊಟ್ಟಿದೆ ಮಾತ್ರವಲ್ಲದೇ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ಮಾಡುವುದಿಲ್ಲ ಎಂಬ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷೆ ಕಿರಣ್ ಕುಮಾರ್, ಕಾರ್ಯದರ್ಶಿ ಎ.ಮಲ್ಲಮ್ಮ, ಸಹ ಕಾರ್ಯದರ್ಶಿ ಈರರಮ್ಮ, ಉಪಾದ್ಯಕ್ಷೆ ವರಲಕ್ಷ್ಮಿ, ಖಜಾಂಚಿ ಇಂದಿರಾ, ಸದಸ್ಯರಾದ ರಾಣಿ ಎಲಿಜಬೆತ್, ಕುರುಗೋಡು ತಾಲ್ಲೂಕು ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ವಿಮಲ, ಕಾರ್ಯದರ್ಶಿ ಕಲಾವತಿ ಸೇರಿದಂತೆ ಹಲವಾರು ಮುಖಂಡರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.