ಅಂಗನವಾಡಿ ಕೇಂದ್ರದತ್ತ ಕಂದಮ್ಮಗಳು

ಲಕ್ಷ್ಮೇಶ್ವರ, ನ9: ಕೋವಿಡ್ ಭೀತಿಯಿಂದಾಗಿ ಕಳೆದ 18 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳ ಬಾಗಿಲುಗಳು ಸೋಮವಾರ ತೆರೆದವು, ಹಾಲು ಹಲ್ಲಿನ ಕಂದಮ್ಮಗಳು ಮತ್ತೆ ಅಂಗನವಾಡಿ ಕೇಂದ್ರಗಳತ್ತ ಮುಖ ಮಾಡಿದವು.
ತಾಲೂಕಿನ 119 ಅಂಗನವಾಡಿ ಕೇಂದ್ರಗಳು ಸೋಮವಾರ ವಿಶೇಷವಾಗಿ ಸಿಂಗರಿಸಲ್ಪಟ್ಟಿದ್ದವು, ಮತ್ತು ಪುಟ್ಟ ಕಂದಮ್ಮಗಳನ್ನು ಅಕ್ಕರೆಯಿಂದ ಕಾರ್ಯಕರ್ತೆಯರು ಬರಮಾಡಿಕೊಂಡರು.
ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್ ಅವರು ಮಕ್ಕಳನ್ನು ಬರಮಾಡಿಕೊಂಡು ಅವರನ್ನು ಕೈಹಿಡಿದು ಕೇಂದ್ರಕ್ಕೆ ಕರೆದುಕೊಂಡುಹೋದರು ಬಳಿಕ ಮಾತನಾಡಿದ ಅವರು ಸರ್ಕಾರ ಮಕ್ಕಳ ಮೇಲೆ ಕೋವಿಡ್ ದುಷ್ಪರಿಣಾಮ ಉಂಟು ಮಾಡಬಾರದು ಎಂಬ ಕಾರಣದಿಂದ ಇದುವರೆಗೂ ಅಂಗನವಾಡಿ ಕೇಂದ್ರಗಳನ್ನು ತೆರೆದಿರಲಿಲ್ಲ ಆದರೆ ಈಗ ರಾಜ್ಯದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ತರಲು ಸರ್ಕಾರ ಹಸಿರು ನಿಶಾನೆ ತೋರಿದ್ದು ಎಲ್ಲರೂ ಜವಾಬ್ದಾರಿಯಿಂದ ಮಕ್ಕಳನ್ನು ಕಳುಹಿಸಬೇಕು ಕಾರ್ಯಕರ್ತೆಯರು ಸಹ ಮಕ್ಕಳ ಮೇಲೆ ನಿಗಾ ಇಟ್ಟು ಅವರನ್ನು ಪೆÇೀಷಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಈರಪ್ಪ ಕುಂಬಾರ, ಸೋಮಣ್ಣ ಬನ್ನಿಕೊಪ್ಪ, ಬಾಲವಿಕಾಸ ಸಮಿತಿಯ ಹಗಲ್ ದೀವಟಿಗೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.