
ಗುರುಮಠಕಲ:ಮೇ.16:ಕಳೆದ ಮೂರು ನಾಲ್ಕು ತಿಂಗಳಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಹಾಲಿನ ಪುಡಿ ಪೂರೈಕೆ ಆಗಿಲ್ಲ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಹಾಲಿನ ಸೇವನೆಯು ಅತ್ಯವಶ್ಯಕವಾಗಿದೆ. ಸರ್ಕಾರದ ಈ ಲೋಪವು ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ 36 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಹಾಗೂ 6 ಲಕ್ಷಕ್ಕೂ ಹೆಚ್ಚು ಗರ್ಭಿಣಿ ಹಾಗೂ ಬಾಣಂತಿಯರನ್ನು ಹಾಲಿನಿಂದ ವಂಚಿತರನ್ನಾಗಿಸಿದೆ.
ಈಗಾಗಲೇ ಸರ್ಕಾರವು ಅವಶ್ಯಕತೆ ಇರುವುದಕ್ಕಿಂತ 5 ಪಟ್ಟು ಕಡಿಮೆ ಹಾಲಿನ ಪುಡಿಯನ್ನು ಪೂರೈಕೆ ಮಾಡುತ್ತಿದೆ. ಮೂರರಿಂದ ಆರು ವರ್ಷದ ಒಳಗಿನ ಒಂದು ಮಗುವಿನ ಸಮರ್ಪಕ ಬೆಳವಣಿಗೆಗೆ ದಿನಕ್ಕೆ ಕನಿಷ್ಟ 450 ಮಿಲಿ ಲೀಟರ್ ಹಾಲಿನ ಅವಶ್ಯಕತೆ ಇದೆ. ಅಂದರೆ 70 ಗ್ರಾಂ ಹಾಲಿನ ಪೌಡರ್ ಬದಲಿಗೆ ಸರ್ಕಾರ ನೀಡುತ್ತಿರುವುದು 15 ಗ್ರಾಂ ಮಾತ್ರ! ಬಡತನ ಮತ್ತು ಆರ್ಥಿಕ ಬಿಕ್ಕಟಿನಿಂದಾಗಿ ರಾಜ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿದಿನ ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ 5000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಕ್ಕಳ ಪೌಷ್ಟಿಕಾಂಶಗಳ ಪೂರೈಕೆಗಾಗಿ ಲಕ್ಷಾಂತರ ಕುಟುಂಬಗಳು ಅಂಗನವಾಡಿ ಕೇಂದ್ರಗಳ ಮೇಲೆ ಅವಲಂಬಿತವಾಗಿವೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಕೃತಕವಾಗಿ ಹಾಲಿನ ಪುಡಿ ಕೊರತೆಯನ್ನು ‘ಜಾನುವಾರು ರೋಗ’ ದ ನೆಪದಲ್ಲಿ ಹುಟ್ಟು ಹಾಕುತ್ತಿದೆ. ಹಾಗಾದಾಗ, ಹಾಲಿನ ಪುಡಿಯ ಪೂರೈಕೆಯನ್ನು ಖಾಸಗಿ ಸಂಸ್ಥೆಯಾದ ಅಮೂಲ್ ವಹಿಸಿಕೊಂಡು, ಮಾರುಕಟ್ಟೆಗೆ ಪ್ರವೇಶ ಮಾಡಲು ನೇರವಾಗಿ ಸರ್ಕಾರವೇ ಸಹಾಯ ಮಾಡುತ್ತಿದೆ ಎಂಬ ಗುಮಾನಿಯು ಜನಸಾಮಾನ್ಯರನ್ನು ಕಾಡುತ್ತಿದೆ.
ಏಕಾಏಕಿ ಹಾಲಿನ ಪುಡಿ ಪೂರೈಕೆ ನಿಲ್ಲಿಸಿರುವುದು ಸರ್ಕಾರವು ಮಕ್ಕಳಿಗೆ ಮಾಡಿರುವ ದ್ರೋಹ ಎಂದೇ ನಾವು ಭಾವಿಸುತ್ತೇವೆ. ಹಾಲಿನ ಕೊರತೆಯು ಲಕ್ಷಾಂತರ ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಒಂದು ವೇಳೆ ರಾಜ್ಯದಲ್ಲಿ ಹಾಲಿನ ಪೂರೈಕೆಯಲ್ಲಿ ಕೊರತೆ ಇದ್ದರೆ ಅದರ ಕುರಿತು ಕೂಡಲೇ ಗಮನಹರಿಸಲಿ. ಒಟ್ಟಾರೆ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಕೂಡಲೇ ಹಾಲಿನ ಪುಡಿ ಪೂರೈಕೆ ನಿಲ್ಲಬಾರದು, ಈ ಕೂಡಲೇ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಸಬೇಕೆಂದು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯು ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಶಿಲ್ಪಾ. ಬಿ. ಕೆ,ಜಿಲ್ಲಾ ಸಂಘಟನಾಕಾರರು,ಯಾದಗಿರಿ. ತಿಳಿಸಿದ್ದಾರೆ.