ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ಸೂಚನೆ

ಗದಗ, ಜು16: ಗದಗ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಶೀಘ್ರವೇ ಸ್ವಂತ ಸೂರು ಕಲ್ಪಿಸಬೇಕು. ಈಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಿರುವಂತೆ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಹಾಲಪ್ಪ ಆಚಾರ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ವಿಕಲಚೇತನ, ಹಿರಿಯ ನಾಗರಿಕ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಹಾಗೂ ಕೈಗೊಂಡ ಕಾಮಗಾರಿಗಳ ಕುರಿತು ಅಂಕಿ ಅಂಶಗಳನ್ನು ಪರಾಮರ್ಶಿಸಿದ ಸಚಿವರು ಈಗಾಗಲೇ ಕೈಗೆತ್ತಿಕೊಳ್ಳಲಾದ ಅಂಗನವಾಡಿ ಕೇಂದ್ರಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಮಕ್ಕಳ ಕಲಿಕೆಗೆ ಒದಗಿಸಬೇಕು. ಈ ಬಗ್ಗೆ ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳು ಅನುಷ್ಠಾನ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಮುಂಡರಗಿ ಪಟ್ಟಣದಲ್ಲಿ ಅಂಗನವಾಡಿ ನಿರ್ಮಾಣಕ್ಕೆ 7 ನಿವೇಶನಗಳ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಕೂಡಲೇ ತಹಶೀಲ್ದಾರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಿವೇಶನಗಳನ್ನು ಒದಗಿಸಲು ಸಚಿವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ. ಎಂ.ಟಿ.ರೇಜು ಮಾತನಾಡಿ ಇಲಾಖೆಯ ಎಲ್ಲ ಯೋಜನೆಗಳು ಸರಿಯಾದ ಅನುಷ್ಠಾನವಾಗಬೇಕು. ನಿಗದಿತ ಅವಧಿಗೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಮಾಡಬೇಕು. ಸರಿಯಾದ ಸಮಯಕ್ಕೆ ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಹಾಗೂ ಊಟ, ಮೊಟ್ಟೆ ಪೂರೈಕೆಯಾಗುತ್ತಿರುವ ಬಗ್ಗೆ ನಿರಂತರ ನಿಗಾವಹಿಸುವಂತೆ ಹೇಳಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ ವಿಕಲಚೇತನರಿಗೆ ಒದಗಿಸಲಾಗುತ್ತಿರುವ ಯುಡಿಆಯ್‍ಡಿ ಕಾರ್ಡಗಳನ್ನು ಶೀಘ್ರ ನೀಡಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಯುಡಿಆಯ್‍ಡಿ ಕಾರ್ಡ ವಿತರಣೆಗೆ ನುರಿತ ತಂಡದ ಕೊರತೆಯಿದ್ದು ಇದನ್ನು ಸರಿದೂಗಿಸಲು ತಿಳಿಸಲಾಗಿದೆ.

ಸಭೆಯಲ್ಲಿ ಶಾಸಕರ ರಾಮಣ್ಣ ಲಮಾಣಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಜಿಲ್ಲಾ ಪೆÇೀಲಿಸ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುಕಮ್ಮನವರ, ಜಿ.ಪಂ. ಉಪಕಾರ್ಯದರ್ಶಿ ಬಸವರಾಜ, ತಹಶೀಲ್ದಾರರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.