ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಮೂರನೇ ಶನಿವಾರ ಪಾಲಕರ ಸಭೆಗೆ ಸೂಚನೆ

ವಿಜಯಪುರ ಆ.22: ಜಿಲ್ಲೆಯಾದ್ಯಂತವಿರುವ ಅಂಗನವಾಡಿ ಕೇಂದ್ರಗಳ ಕುರಿತು ವಿಶೇಷ ಆಸಕ್ತಿ ಹೊಂದಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಕೇಂದ್ರದ ಮಕ್ಕಳಿಗೆ 552 ಮಕ್ಕಳ ಸ್ನೇಹಿ ಚೇರ್ ಹಾಗೂ ಟೇಬಲ್‍ಗಳನ್ನು ಗ್ರಾಮ ಪಂಚಾಯತ್ ವತಿಯಿಂದ ವಿತರಿಸಲಾಗಿದ್ದು, ತಿಂಗಳ ಮೂರನೇ ಶನಿವಾರದಂದು ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಸಭೆಗಳನ್ನು ಆಯೋಜಿಸುವಂತೆ ಅವರು ಸೂಚಿಸಿದ್ದಾರೆ.
ಅಂಗನವಾಡಿ ಕೇಂದ್ರದ ಮಕ್ಕಳಲ್ಲಿ ಉತ್ಸುಕತೆ ಹೆಚ್ಚಿಸಲು ಮೂಲಸೌಲಭ್ಯ ಕಲ್ಪಿಸುವುದಲ್ಲದೇ, ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ಮೂರನೇ ಶನಿವಾರ ಪಾಲಕರ ಸಭೆಗಳನ್ನು ಆಯೋಜಿಸಿ, ಮಕ್ಕಳಲ್ಲಾಗುವ ಗುಣಾತ್ಮಕ ಬದಲಾವಣೆ, ಮಕ್ಕಳಿಗೆ ಕಲ್ಪಿಸಲಾಗುವ ಸೌಲಭ್ಯ, ಮಕ್ಕಳ ಪೌಷ್ಠಿಕ ಮಟ್ಟ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಪಾಲಕರ ಪಾತ್ರ ಕುರಿತು ಪಾಲಕರೊಂದಿಗೆ ಚರ್ಚಿಸುವಂತೆ ಅವರು ಸೂಚಿಸಿದ ಹಿನ್ನಲೆಯಲ್ಲಿ ಆಗಸ್ಟ್ 19ರಂದು ಮೂರನೇ ಶನಿವಾರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಸಭೆಯಲ್ಲಿ 0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟವನ್ನು ವೃದ್ಧಿಸಲು ಮಕ್ಕಳಿಗೆ ಆರೋಗ್ಯ ತಪಾಸಣೆ , ಮಕ್ಕಳ ಪೌಷ್ಠಿಕ ಮಟ್ಟ ಹೆಚ್ಚಿಸಲು ಹಾಲು, ಮೊಟ್ಟೆ ವಿತರಣೆ ಹಾಗೂ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳು ನಿಯಮಿತವಾಗಿ ಸರಬರಾಜು, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲು ಐಸಿಡಿಎಸ್ ಮಿಷನ್ ಅಡಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣದಡಿ ದಿನಬಳಕೆ ಸ್ಥಳೀಯ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಅಂಗನವಾಡಿ ಕೇಂದ್ರವನ್ನು ಮಕ್ಕಳ ಕಲಿಕಾ ಸ್ನೇಹಿ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ಪೋಷಕರಿಗೆ ತಿಳಿಸಲಾಯಿತು.
ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲು ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಕೇಂದ್ರಗಳಲ್ಲಿ ಏರ್ಪಡಿಸುತ್ತಿರುವ ಬಗ್ಗೆ ಹಾಗೂ ಮಕ್ಕಳ ಭಾಗವಹಿಸುವಿಕೆ ಕುರಿತು ಪ್ರಯೋಗಿಕವಾಗಿ ಚಟುವಟಿಕೆಗಳನ್ನು ಪ್ರದರ್ಶಿಸಿ ತೋರಿಸಲಾಯಿತು.
ಮಕ್ಕಳಿಗೆ ಚುಚ್ಚುಮದ್ದುಗಳನ್ನು ನಿಯಮಿತವಾಗಿ ಕೊಡಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಆರೋಗ್ಯ ಮತ್ತು ಪೌಷ್ಠಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ತಿಳಿಸಲಾಯಿತು.
ಇಲಾಖೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸಲು ಹಲವಾರು ಯೋಜನೆಗಳು ಜಾರಿಗೆ ಬಂದಿದ್ದು ಅದರಲ್ಲಿ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ದಿ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಲಾಯಿತು.
ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ನಿವೇಶನ ನೀಡಲು ದಾನಿಗಳನ್ನು ಗುರುತಿಸುವುದು ಹಾಗೂ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಫ್ಯಾನ್, ಕುಡಿಯುವ ನೀರು, ಶೌಚಾಲಯ, ಕೈ ತೋಟಗಳ ವ್ಯವಸ್ಥೆ ಮಾಡಿಸಲು ಪಾಲಕರಲ್ಲಿ ಮನವಿ ಮಾಡಿಕೊಳ್ಳಲಾಯಿತು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ, ಬಾಣಂತಿಯರು ಕೇಂದ್ರದಲ್ಲಿಯೇ ಬಂದು ಪೂರಕ ಪೌಷ್ಠಿಕ ಆಹಾರ ಪಡೆಯಲು ಪಾಲಕರು ಫಲಾನುಭವಿಗಳನ್ನು ಪ್ರೇರೆಪಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಕೇಂದ್ರದಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಹಾಗೂ ಮಕ್ಕಳು ಗೈರಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ವೈಯಕ್ತಿಕ ಶುಚಿತ್ವದ ಬಗ್ಗೆ ಗಮನ ಹರಿಸುವುದು ಹಾಗೂ ಶೌಚಾಲಯದ ಬಳಕೆಯ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ವಯಕ್ತಿಕ ಶುಚಿತ್ವ ಶಿಸ್ತು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವಾಯುವಿಹಾರ ಸೇರಿದಂತೆ ಮಕ್ಕಳಲ್ಲಿ ಶಿಸ್ತು ಬೆಳೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮನವರಿಕೆ ಮಾಡಲಾಯಿತು.
ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬಾಲ ವಿಕಾಸ ಸಮಿತಿ, ತಾಯಂದಿರ ಸಭೆ, ಮಕ್ಕಳ ಕಾವಲು ಸಮಿತಿ ಹಾಗೂ ಪೆÇೀಷಕರ ಸಭೆಯಲ್ಲಿ ಪಾಲಕರು ಅಂದರೆ ಕೇವಲ ತಾಯಂದಿರು ಮಾತ್ರವಲ್ಲದೆ ಮಕ್ಕಳ ತಂದೆ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ ತಮ್ಮ ಸಹಭಾಗಿತ್ವ ನೀಡಬೇಕು. ಅಂಗನವಾಡಿ ಕೇಂದ್ರಗಳು ಅಭಿವೃದ್ದಿಯಾಗುವ ದಿಸೆಯಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳು ಪರಿಣಾಮಕಾರಿಯಾದ ಸಮನ್ವಯತೆಯನ್ನು ಸಾಧಿಸಲು ಸಹಕರಿಸುವಂತೆ ಪಾಲಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಪಾಲಕರ ಸಭೆಯಲ್ಲಿ ಎಲ್ಲಾ ಪಾಲಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವಂತೆ ಮಕ್ಕಳ ಆರೋಗ್ಯ, ಅಪೌಷ್ಠಿಕತೆ ಕಡಿಮೆಮಾಡಲು ಪೌಷ್ಠಿಕಾಂಶಯುಕ್ತ ಅಹಾರ ಸೇವನೆ, ಶುಚಿತ್ವ ಆರೋಗ್ಯ ಇತ್ಯಾದಿಗಳ ಕುರಿತು ಪಾಲಕ ರೊಂದಿಗೆ ಸಮಾಲೋಚಿಸಲಾಯಿತು.
ಜಿಲ್ಲೆಯಲ್ಲಿ ಒಟ್ಟು 2755 ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಮಕ್ಕಳ ದಾಖಲಾತಿ 201975 ಇದ್ದು, ಪಾಲಕರ ಸಭೆಯಲ್ಲಿ ಸುಮಾರು 44514 ಕ್ಕೂ ಹೆಚ್ಚು ಪಾಲಕರು ಸಭೆಯಲ್ಲಿ ಪಾಲ್ಗೊಂಡಿದ್ದರು.